ಹೊನ್ನಾಳಿ, ಜು.21- ಪಟ್ಟಣದ ತುಂಗಭದ್ರಾ ನದಿ ಪ್ರವಾಹ ಹಿನ್ನೆಲೆಯಲ್ಲಿ ಬಾಲರಾಜ್ ಘಾಟ್ ಹಾಗೂ ಬಂಬೂಬಜಾರ್ ಮುಳುಗಡೆಯ ಪ್ರದೇಶವನ್ನು ಶಾಸಕ ಡಿ.ಜಿ. ಶಾಂತನಗೌಡ ಅವರು ತಾಲ್ಲೂಕು ಅಧಿಕಾರಿಗಳೊಂದಿಗೆ ನಿನ್ನೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ವಾಡಿಕೆಗಿಂತ ಹೆಚ್ಚು ಮಳೆ ಆಗುತ್ತಿದೆ. ಹೊನ್ನಾಳಿ ಪಟ್ಟಣ ಸೇರಿದಂತೆ ಸಾಸ್ವೆಹಳ್ಳಿ ಪ್ರದೇಶಗಳಿಂದ ಹಾನಿಗೊಳಗಾ ಗಬಹುದಾದ 28 ಕುಟುಂಬಗಳಿಂದ 125 ಸಂತ್ರಸ್ಥರನ್ನು ಗುರುತಿಸಲಾಗಿದೆ. 13 ಮೀಟರ್ ನದಿ ಪಾತ್ರ ತಲುಪಿದರೇ ಮಾತ್ರ ಅಪಾಯ ಮಟ್ಟ ತಲುಪುತ್ತದೆ.
ಹೊನ್ನಾಳಿ ಪಟ್ಟಣದಲ್ಲಿ ಕಾಳಜಿ ಕೇಂದ್ರವನ್ನು ಅಂಬೇಡ್ಕರ್ ಭವನದಲ್ಲಿ ಹಾಗೂ ಸಾಸ್ವೆಹಳ್ಳಿ ಭಾಗದ ಸಂತ್ರಸ್ತರಿಗೆ ಸ್ವಾಮಿ ವಿವೇಕಾನಂದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದರು.
ಕೃಷಿ ಹಾಗೂ ತೋಟಗಾರಿಕೆ ಹಾನಿ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿರುವರು. ಈವರೆಗೆ ಹೊನ್ನಾಳಿಯಲ್ಲಿ ಒಂಭತ್ತು ಪಕ್ಕ ಮನೆ ಹಾನಿಯಾಗಿದ್ದು, ಒಂದು ದನದ ಕೊಟ್ಟಿಗೆ ಬಿದ್ದಿದೆ. ನ್ಯಾಮತಿಯಲ್ಲಿ 15 ಮನೆಗಳಿಗೆ ಹಾನಿಯಾಗಿದೆ.
ಇಂದಿನ ನದಿ ನೀರಿನ ಪ್ರಮಾಣವು 10.38 ಇದ್ದು ಆತಂಕ ಪಡುವಂತಿಲ್ಲ. ಆದರೂ, ಅಧಿಕಾರಿಗಳು ಮುಂಜಾಗ್ರತೆ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಅಭಿಷೇಕ್ ತಹಶೀಲ್ದಾರ್ ಪಟ್ಟರಾಜೇಗೌಡ, ನ್ಯಾಮತಿ ತಹಶೀಲ್ದಾರ್ ಗೋವಿಂದಪ್ಪ, ಇಒ ರಾಘವೇಂದ್ರ, ಉಪ ತಹಶೀಲ್ದಾರ್ ಚಂದ್ರಪ್ಪ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಇನ್ನಿತರರು ಉಪಸ್ಥಿತರಿದ್ದರು.