ಗಾಯತ್ರಿ ಸಿದ್ಧೇಶ್ವರ ಸೋಲಿಗೆ ಲಗಾನ್ ಬಾಯ್ಸ್ ಟೀಂ ಕಾರಣವಲ್ಲ

ದಾವಣಗೆರೆ, ಜು.21- ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರರ ಸೋಲಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಗಾಲೀ, ಲಗಾನ್ ಬಾಯ್ಸ್ ಟೀಂ ಕಾರಣ ಎಂಬ ಆರೋಪ ಸಲ್ಲದು ಎಂದು ಹೊನ್ನಾಳಿ-ನ್ಯಾಮತಿ ಬಿಜೆಪಿ ಮಂಡಲ ಅಧ್ಯಕ್ಷ ಜಿ.ಕೆ. ಸುರೇಶ್ ಸ್ಪಷ್ಟನೆ ನೀಡಿದರು.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ, ರವೀಂದ್ರನಾಥ್ ಮತದಾರರಿಗೆ, ನಿಷ್ಠಾವಂತ ಕಾರ್ಯಕರ್ತರಿಗೆ ಪದೇ ಪದೇ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಅವರ ಅವಧಿಯಲ್ಲಿ ಪಕ್ಷವನ್ನು ಎಷ್ಟರಮಟ್ಟಿಗೆ ಸಂಘಟಿಸಿದ್ದಾರೆ. ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಜನ ಶಾಸಕರನ್ನು ಬಿಜೆಪಿಯಿಂದ ಗೆಲ್ಲಿಸಿದ್ದಾರೆ. ಹರಿಹರ ಕ್ಷೇತ್ರದಲ್ಲಿ ಬಿಜೆಪಿಗೆ ಎಷ್ಟು ಲೀಡ್ ಕೊಡಿಸಿದ್ದಾರೆ ಎಂಬುದನ್ನು ಬಹಿರಂಗವಾಗಿ ಸ್ಪಷ್ಟಡಿಸಲಿ ಎಂದು ಹೇಳಿದರು.

ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಸಚಿವ ಮಲ್ಲಿಕಾರ್ಜುನ್ ವಿರುದ್ಧವಾಗಲಿ ಮಾತನಾಡಿಲ್ಲ. ರೇಣುಕಾಚಾರ್ಯ ಅವರು ಏನೂ ಇಲ್ಲದೇ ಪಕ್ಷಕ್ಕೆ ಬಂದು, ಮೂರು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ, ನಾಯಕರಾಗಿ ಬೆಳೆಯುತ್ತಿದ್ದಾರೆ. ಇದನ್ನು ಸಹಿಸದೇ ಪದೇ ಪದೇ ಸುದ್ದಿಗೋಷ್ಠಿ ನಡೆಸಿ ನಿಂದಿಸುವುದರಿಂದ ದೊಡ್ಡ ನಾಯಕರಾಗಿ ಬೆಳೆಯುತ್ತೇವೆ ಎಂಬ ಭ್ರಮೆಯಲ್ಲಿ ಹನಗವಾಡಿ ವೀರೇಶ್ ಇದ್ದಾರೆ ಎಂದರು.

ಜಿಲ್ಲಾ ಬಿಜೆಪಿಯಲ್ಲಿನ ರೇಣುಕಾಚಾರ್ಯ ಅವರ ಬೆಳವಣಿಗೆ ಸಹಿಸದೇ ಹತಾಶ ಭಾವನೆಯಿಂದ ಪದೇ ಪದೇ ಅವರ ವಿರುದ್ಧ ನಿಂದಿಸುವುದು, ದೂರುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯದ ಮುಖಂಡರಿಗೆ ದೂರು ಸಲ್ಲಿಸಲಾಗುವುದು. ಕೆಲವರು ರೇಣುಕಾಚಾರ್ಯ ಅವರನ್ನು ಪಕ್ಷದಿಂದ ಅಮಾನತ್ತು ಮಾಡಿಸುತ್ತೇ ವೆಂದು ಹೇಳುತ್ತಿದ್ದಾರೆ. ಅವರಿಗೆ ತಾಕತ್ತು ಇದ್ದರೆ ಪಕ್ಷದಿಂದ ಉಚ್ಛಾಟಿಸಲಿ ಎಂದು ಗುಡುಗಿದರು.

ಚನ್ನಗಿರಿ ಬಿ. ಉಮೇಶ್ ಕುಮಾರ್ ಮಾತನಾಡಿ, ಬಿಜೆಪಿಯಲ್ಲಿನ ಆಂತರಿಕ ವಿಚಾರಗಳನ್ನು ಪದೇ ಪದೇ ಪತ್ರಿಕಾಗೋಷ್ಠಿಯ ಮೂಲಕ ಪ್ರಚಾರ ಮಾಡಿ ಪಕ್ಷದ ಮರ್ಯಾದೆಯನ್ನು ಹರಾಜು ಹಾಕುವ ಕೆಲಸ ನಡೆಯುತ್ತಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮುಜುಗರ ಉಂಟು ಮಾಡಲಾಗುತ್ತಿದೆ. ಇದನ್ನು ಇಲ್ಲಿಗೇ ಅಂತ್ಯಗೊಳಿಸುವಂತೆ ಮನವಿ ಮಾಡಿದರು.

ರೇಣುಕಾಚಾರ್ಯ, ಮಾಡಾಳು ಮಲ್ಲಿಕಾರ್ಜುನ ಅವರಿಂದಾಗಿ ಗಾಯತ್ರಿ ಸಿದ್ಧೇಶ್ವರ ಸೋತಿಲ್ಲ. ಜಿಎಂಐಟಿ ಬಾಯ್ಸ್ ನ ಒಳ ಹೊಡೆತದಿಂದ ಸೋಲಾಗಿದೆ. ಪ್ರಾಮಾಣಿಕ ಕೆಲಸ ಮಾಡಿದ್ದರೆ, ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಗಂಟೆ ಹೊಡೆಯಲಿ ಎಂದು ಸಾವಾಲಾಕಿದ್ದಾರೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳ ಗೆಲುವಿಗೆ ಸಿದ್ದೇಶ್ವರ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದಾದರೆ ಗಂಟೆ ಹೊಡೆಯಲಿ. ಆಮೇಲೆ ಲೋಕಸಭಾ ಚುನಾವಣೆ ಬಗ್ಗೆ ಮಾತನಾಡಲಿ ಎಂದರು.

ಲೋಕಸಭಾ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಎಂದು ಬರೀ ಧರ್ಮಸ್ಥಳ ಅಲ್ಲ, ಎಲ್ಲಿ ಬೇಕಾದರೂ ಗಂಟೆ ಹೊಡೆಯುತ್ತೇವೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಕುಬೇರಪ್ಪ, ಉಮೇಶ್ ಹೊದಿಗೆರೆ, ಮಂಜಣ್ಣ, ಮಲ್ಲಿಕಾರ್ಜುನ್, ನಾಗರಾಜ್, ಕುಮಾರ್ ಉಪಸ್ಥಿತರಿದ್ದರು.

error: Content is protected !!