ರಂಗಭೂಮಿ ಬಗ್ಗೆ ಸಿಜೆಕೆಗೆ ಅಪಾರ ಆಸಕ್ತಿ

ರಂಗಭೂಮಿ ಬಗ್ಗೆ ಸಿಜೆಕೆಗೆ ಅಪಾರ ಆಸಕ್ತಿ

ಪಾಂಡೋಮಟ್ಟಿ ಡಾ.ಗುರುಬಸವ ಸ್ವಾಮೀಜಿ

ದಾವಣಗೆರೆ, ಜು.21- ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದ ಪ್ರೊ.ಸಿ.ಜಿ. ಕೃಷ್ಣಸ್ವಾಮಿ (ಸಿಜಿಕೆ) ಅವರು ಕನ್ನಡ, ಸಂಸ್ಕೃತ, ರಂಗಭೂಮಿಯ ಬಗ್ಗೆ ಅಪಾರ ಆಸಕ್ತಿ ವಹಿಸಿದ್ದರು. ರಂಗ ಚಟುವಟಿ ಕೆಯನ್ನು ಜೀವಂತವಾಗಿಡುವುದರಲ್ಲಿ ಅವರ ಕೊಡುಗೆ ಅಪಾರವಾಗಿತ್ತು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವ ಸ್ವಾಮೀಜಿ ಹೇಳಿದರು.

ನಗರದ ರೋಟರಿ ಬಾಲ ಭವನದಲ್ಲಿ ಕರ್ನಾಟಕ ರಂಗ ಪರಿಷತ್ತು, ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಸಿಜಿಕೆ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಟಿವಿ ಹಾವಳಿ ಮಧ್ಯೆ ಹಳ್ಳಿಗಾಡಿನ ಸೊಗಡು ಕಣ್ಮರೆಯಾಗುತ್ತಿದೆ.  ಏತನ್ಮಧ್ಯೆಯೂ ಕಲಾವಿದರು ತಮ್ಮ ಕಷ್ಟಕಾರ್ಪಣ್ಯದ ನಡುವೆಯೂ ರಂಗಾಸಕ್ತಿಯನ್ನು ಉಳಿಸಿಕೊಂಡಿದ್ದಾರೆ. ಇಂತಹ ಬಡ ಕಲಾವಿದರಿಗೆ ಉತ್ತೇಜನ ಕೊಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಪ್ರಶಸ್ತಿ, ಪುರಸ್ಕಾರ ನೀಡುವ ಸರ್ಕಾರ, ಸಂಘ ಸಂಸ್ಥೆಗಳು ಮತ್ತು ಮಠಗಳ ಮೇಲೆ ಸಾಕಷ್ಟು ಒತ್ತಡ ಇರಲಿದೆ. ಪೈಪೋಟಿ ನಡೆಸುವವರು ಬಹಳ ಜನರಿರುತ್ತಾರೆ. ಆದರೆ, ಇಲ್ಲಿ ನಿಜವಾದ ಸಾಧಕರನ್ನು ಗುರುತಿಸಿ, ಪ್ರಶಸ್ತಿ ಕೊಡುತ್ತಿರುವುದು ಸಂತೋಷದ ವಿಚಾರ  ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ರಂಗಕರ್ಮಿ ಎಚ್.ಎಸ್. ದ್ಯಾಮೇಶ್ ಮಾತನಾಡಿ, ವಿಶ್ವಗುರು ಬಸವಣ್ಣನವರು ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅವರ ವಚನಗಳಲ್ಲಿ ಜಗತ್ತಿನ ಸಮಸ್ತ ಸಂಕಟಗಳಿಗೆ ಪರಿಹಾರ ದೊರೆಯಲಿದೆ. ಹಾಗಾಗಿ, ಅವರನ್ನು ಜಾಗತಿಕವಾಗಿ ಸಾಂಸ್ಕೃತಿಕ ನಾಯಕರೆಂದು ಪರಿಭಾವಿಸಬೇಕಾಗಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಕಾರದ ಸದಸ್ಯ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಲಿಂಗಾಯತ ಧರ್ಮ ಕರ್ನಾಟಕಕ್ಕೆ ಅಲ್ಲದೆ ಭಾರತಕ್ಕೆ ಬೇಕಾದ ಧರ್ಮವಾಗಿದೆ. 

ಬಸವಣ್ಣ ಸಾಂಸ್ಥಿಕ ನೆಲೆಯಿಂದ ಹೊರಬಂದು ನಮಗೆ ಜಂಗಮತ್ವ ಕಲಿಸಿದವರು. ಆದರೂ ಅವರನ್ನು ಸಾಂಸ್ಥೀಕರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲಿಂಗಾಯತ ಮಠಗಳು ಬಸವಣ್ಣನನ್ನು ಗಂಭೀರವಾಗಿ ಅರ್ಥ ಮಾಡಿಕೊಂಡಿದ್ದರೆ ಕರ್ನಾಟಕದಲ್ಲಿ ಇಂದು ಕೋಮುವಾದಿ ರಾಜಕಾರಣ ಕಾಲಿಡುತ್ತಿರಲಿಲ್ಲ ಎಂದರು.

ಈ ವೇಳೆ ರಂಗಕರ್ಮಿ ಜಿ.ಎಚ್. ರುದ್ರೇಶ್ ಅವರಿಗೆ ಸಿಜಿಕೆ ಪ್ರಶಸ್ತಿ ಹಾಗೂ ವಿಭೂತಿ ಬಸವಾನಂದರಿಗೆ ಬಸವ ಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್‌ ಅವರನ್ನು ಸನ್ಮಾನಿಸಲಾಯಿತು.  

ಶ್ರೀ ರೇವಣಸಿದ್ದೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಎಸ್. ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಂಗಕರ್ಮಿ ಎನ್.ಎಸ್.ರಾಜು, ಜಿ.ಎಸ್. ಲಿಂಗರಾಜು ಇದ್ದರು. ಬಿ.ಇ. ತಿಪ್ಪೇಸ್ವಾಮಿ ಮತ್ತು ಸಂಗಡಿಗರು ಸುಗಮ ಸಂಗೀತ ಪ್ರಸ್ತುತ ಪಡಿಸಿದರು. ಬಿ.ಹನುಮಂತಚಾರಿ ಮತ್ತು ಸಂಗಡಿಗರು ವೀರಗಾಸೆ ಪ್ರದರ್ಶಿಸಿದರು.

error: Content is protected !!