ದಾವಣಗೆರೆ, ಜು. 21 – ಭದ್ರಾ ಜಲಾಶಯದಲ್ಲಿ ಸಂಗ್ರಹ ವಾಗಿರುವ ನೀರು ಯಾವುದೇ ರೀತಿಯಲ್ಲಿ ಪೋಲಾಗದಂತೆ ಸಂಗ್ರ ಹಿಸಿ, ರೈತರ ಎರಡು ಬೆಳೆಗಳಿಗೆ ನೀರು ಕೊಡುವುದು ಅಧಿಕಾರಿಗಳ ಹೊಣೆಯಾಗಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಇಲ್ಲಿಗೆ ಸಮೀಪದ ಬಾಡ ಗ್ರಾಮದ ಮರಳಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭದ್ರಾ ಅಚ್ಚು ಕಟ್ಟು ಪ್ರದೇಶದ ರೈತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಬಾರಿ ಭೀಕರ ಬರಗಾಲದಿಂದ ರೈತರು ಭತ್ತ ಬೆಳೆಯಲು ಆಗಲಿಲ್ಲ. ಈ ಬಾರಿ ಮುಂಗಾರು ಮಳೆ ಅಬ್ಬರದಿಂದ ಭದ್ರಾ ಜಲಾಶಯದಲ್ಲಿ 165 ಅಡಿ ನೀರು ಸಂಗ್ರಹವಾಗಿದ್ದು, ಇನ್ನು 20 ಅಡಿ ಬಾಕಿ ಇದೆ. ನೀರು ಸಂರಕ್ಷಿಸಿ ರೈತರ ಎರಡು ಬೆಳೆಗಳಿಗೆ ನೀರು ಕೊಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.
ಭದ್ರಾ ಕಾಲುವೆಗಳಿಗೆ ಹೊಂದಿಕೊಂಡಿರುವ ಕೆರೆಗಳಿಗೆ ಮೊದಲು ನೀರು ತುಂಬಿಸಿಕೊಂಡು ನಂತರ ಭತ್ತ ನಾಟಿ ಮಾಡಲು ಅವಕಾಶ ನೀಡಬೇಕು. ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿರುವ ಕಾಲುವೆ ಅಭಿವೃದ್ಧಿ ಕಾಮಗಾರಿಗಳಿಗೆ ಪುನಃ ಚಾಲನೆ ನೀಡಬೇಕು. ಕಾಲುವೆ ದುರಸ್ತಿ ಮಾಡಿ ಹಂತ ಹಂತವಾಗಿ ನೀರು ಬಿಡಲು ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸು ವುದಾಗಿ ತಿಳಿಸಿದರು. ತುಂಗಾ ಜಲಾಶಯ ದಿಂದ ಭದ್ರಾ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಸ್ಥಗಿತಗೊಂಡಿದ್ದು, ಕೂಡಲೇ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಪರಿಸರ ಇಲಾಖೆಯಿಂದ ಅಡ್ಡಿಯಾಗಿರುವ ತೊಡಕು ನಿವಾರಿಸಿ ಪುನಃ ಕಾಮಗಾರಿ ಆರಂಭಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ಈ ಯೋಜನೆ ಪೂರ್ಣಗೊಂಡರೆ ಮಳೆಗಾಲದಲ್ಲಿ ತುಂಗಾ ಜಲಾಶಯದಿಂದ ಸಾವಿರಾರು ಕ್ಯೂಸೆಕ್ಸ್ ನೀರು ಪೋಲಾಗುವುದನ್ನು ಭದ್ರಾ ಜಲಾಶಯಕ್ಕೆ ತುಂಬಿಸಿದರೆ ಅಪ್ಪರ್ ಭದ್ರಾ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಿಗೆ ಸಮರ್ಪಕ ನೀರು ಪೂರೈಸಬಹುದಾಗಿದೆ ಎಂದರು.
40 ಕೋಟಿ ರೂ. ಬಿಡುಗಡೆಗೆ ಶೀಘ್ರವೇ ಅನುಮೋದನೆ
ನನ್ನ ಮತ ಕ್ಷೇತ್ರದ ವ್ಯಾಪ್ತಿಯು ಅತಿ ಹೆಚ್ಚು ನೀರಾವರಿ ಪ್ರದೇಶ ಹೊಂದಿದ್ದು, ಭದ್ರಾ ಕಾಲುವೆ ಗಳನ್ನು ವೀಕ್ಷಿಸಿ ಇಲ್ಲಿನ ನೀರಿನ ಸಮಸ್ಯೆ, ಕಾಲುವೆಗಳ ಸಮಸ್ಯೆ, ಗೇಟ್ಗಳ ಸಮಸ್ಯೆ ಹಾಗೂ ಸೇತುವೆಗಳ ಸಮಸ್ಯೆಗಳ ಬಗ್ಗೆ ಕಳೆದ ಅಧಿವೇಶನದಲ್ಲಿ ಬೆಳಕು ಚೆಲ್ಲಿದ್ದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 40 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಈಗ ನೀರಾವರಿ ಇಲಾಖೆಯಲ್ಲಿ ಅನುದಾನ ಬಿಡುಗಡೆಗೆ ಪ್ರಕ್ರಿಯೆ ಹಂತದಲ್ಲಿದ್ದು, ಅಲ್ಲಿಂದ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಶೀಘ್ರವೇ 40 ಕೋಟಿ ರೂ. ಅನುದಾನ ಬಿಡುಗಡೆ ಆಗಲಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಭದ್ರಾ ಇಂಜಿನಿಯರ್ಗಳು ವೈಜ್ಞಾನಿಕ ತಂತ್ರಜ್ಞಾನ ಬಳಸಿ ಭದ್ರಾ ಜಲಾಶಯದಲ್ಲಿ ಉಂಟಾಗಿರುವ ನೀರೆತ್ತುವ ಗೇಟ್ನ ಸಮಸ್ಯೆ ಬಗೆಹರಿಸಬೇಕು. ಜಲಾಶಯದಿಂದ ಯಾವುದೇ ಕಾರಣಕ್ಕೂ ನೀರು ಪೋಲಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ತಾಕೀತು ಮಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಆರ್ಥಿಕವಾಗಿ ಬಲಪಡಿಸಿದಂತೆ ನೀರು ಬಳಕೆದಾರರ ಸಂಘಗಳನ್ನು ಆರ್ಥಿಕವಾಗಿ ಬಲಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲು ಒತ್ತಡ ಹಾಕುವುದಾಗಿ ಭರವಸೆ ನೀಡಿದ ಶಾಸಕರು, ನಾಳೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ವೇಳೆ ನೀರಾವರಿ ಸಚಿವರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ಮಾಡಿ ಕೂಡಲೇ ಸಲಹಾ ಸಮಿತಿ ಸಭೆ ಕರೆದು ನೀರು ಬಿಡುಗಡೆಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಅತ್ತಿಗೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಎ.ಒ. ರವಿಕುಮಾರ್, ಶರಣಪ್ಪ, ತಾ.ಪಂ. ಮಾಜಿ ಸದಸ್ಯ ಧರ್ಮಪ್ಪ, ಗ್ರಾ.ಪಂ. ಸದಸ್ಯ ರಂಗನಾಥ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್, ಸಿದ್ದೇಶ್ವರ ಕಬ್ಬೂರು, ದೇವೇಂದ್ರಪ್ಪ, ಬಾಡ ರುದ್ರಸ್ವಾಮಿ, ಮಳಲಕೆರೆ ಸುಭಾಷ್ಗೌಡ್ರು, ಮುರುಗೇಂದ್ರಪ್ಪ, ಕೃಷ್ಣಮೂರ್ತಿ, ಎಂ.ಡಿ. ಸುರೇಶಪ್ಪ, ಲೋಕಿಕೆರೆ ರವಿಕುಮಾರ್, ಗೋಪನಾಳ ನಿಂಗರಾಜ್, ಕಬ್ಬೂರ್ ಬಸವರಾಜಪ್ಪ, ಕಂದಗಲ್ ಕುಮಾರ, ಮಂಜುನಾಥ್, ಮಳಲ್ಕೆರೆ ವೆಂಕಟೇಶ್, ಹುಮ್ಮಜ್ಜ, ಅಣಬೇರು ಬುಡನ್ ಸಾಬ್ ಹಾಗೂ ಅಚ್ಚುಕಟ್ಟು ಪ್ರದೇಶದ ರೈತರು ಸಭೆಯಲ್ಲಿ ಭಾಗವಹಿಸಿದ್ದರು.