ಭದ್ರಾ ಸೋರಿಕೆ ತಡೆಗೆ ಆಗ್ರಹಿಸಿ 24ರಂದು ಹೆದ್ದಾರಿ ಬಂದ್‌

ಭದ್ರಾ ಸೋರಿಕೆ ತಡೆಗೆ ಆಗ್ರಹಿಸಿ 24ರಂದು ಹೆದ್ದಾರಿ ಬಂದ್‌

ದಾವಣಗೆರೆ, ಜು.21- ಭದ್ರಾ ಜಲಾಶಯದ ದುರಸ್ತಿ ಹಾಗೂ ನೀರು ಸೋರಿಕೆ ತಡೆಯಲು ಆಗ್ರಹಿಸಿ ಎಸ್‌.ಎ. ರವೀಂದ್ರನಾಥ್‌ ಅವರ ನೇತೃತ್ವದಲ್ಲಿ ಇದೇ ದಿನಾಂಕ 24ರ ಬುಧವಾರ ಬೆಳಗ್ಗೆ 11ಕ್ಕೆ ಬಾಡಾ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡುವುದಾಗಿ ಮಾಜಿ ಶಾಸಕ ರೇಣುಕಾಚಾರ್ಯ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಸರ್ಕ್ಯೂಟ್‌ ಹೌಸ್‌ನಲ್ಲಿ ಇಂದು ಸಂಜೆ ನಡೆದ ರೈತ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಹಲವು ಮುಖಂಡರ ಸಮ್ಮುಖದಲ್ಲಿ ಅವರು ಮಾತನಾಡಿದರು.

ಈ ಹಿಂದೆ ದುರಸ್ತಿಗೊಳಿಸಿದ ಜಲಾ ಶಯದ ಗೇಟಿನಿಂದ ಮತ್ತೆ ನೀರು ಸೋರಿಕೆ ಕಂಡು ಬರುತ್ತಿದ್ದು, ಸರ್ಕಾರವು ಜಲಾಶಯದ ಸುರಕ್ಷತೆಗಾಗಿ 100 ಕೋಟಿ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ತುರ್ತುಗೇಟ್‌ಗೆ ಕಾಂಕ್ರಿಟ್‌ ಹಾಕುವುದು, ಸ್ಲೂಯಿಸ್‌ ಗೇಟಿನ ನೀರು ಸೋರಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ತಕ್ಷಣವೇ ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆಯಬೇಕೆಂದು ಒತ್ತಾಯಿಸಿದರು.

ನಾಲೆಗಳಲ್ಲಿ ಜಂಗಲ್‌ ಬೆಳೆದು ಹೂಳು ತುಂಬಿಕೊಂಡಿದ್ದನ್ನು ಸರಿಪಡಿಸುವ ಜತೆಗೆ ಸಕಾಲಕ್ಕೆ ಜಲಾಶಯದಿಂದ ನೀರು ಪೂರೈಸು ವಂತೆ ನೋಡಿಕೊಳ್ಳಬೇಕೆಂದು ಬೇಡಿಕೆ ಇಟ್ಟರು. ಭದ್ರಾ ಉಳಿವಿಗಾಗಿ ನಮ್ಮ ಬಲಿಷ್ಠ ಹೋರಾಟ ಸರ್ಕಾರದ ಗಮನ ಸೆಳೆಯಬೇಕು. ಈ ನಿಟ್ಟಿನಲ್ಲಿ ರೈತರೆಲ್ಲರೂ ಬಹು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ರೈತ ಮುಖಂಡ ಸತೀಶ್‌ ಕೊಳೇನಹಳ್ಳಿ ಮಾತನಾಡಿ, ಭದ್ರಾ ಜಲಾಶಯದ ವಿಚಾರ ವಾಗಿ ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಹೆದ್ದಾರಿ  ಬಂದ್ ಮಾಡುವುದು ಸೂಕ್ತ ಎಂದರು.

ರೈತ ಮುಖಂಡ ತೇಜಸ್ವಿ ಪಟೇಲ್‌ ಮಾತನಾಡಿ, ಆಗಸ್ಟ್‌ 1ಕ್ಕೆ ನಿರಾವರಿ ಸಲಹಾ ಸಮಿತಿ ಸಭೆ ಕರೆದು ಅಲ್ಲಿ ಶಾಸಕರಿಗಿಂತ ಹೆಚ್ಚು ಅನುಭವ ಹೊಂದಿದ ರೈತ ಪ್ರತಿನಿಧಿ ಹಾಗೂ ನೀರಾವರಿ ಇಂಜಿನಿಯರ್‌ಗಳ ಸಲಹೆಗೆ ಮಾನ್ಯತೆ ನೀಡಬೇಕು ಎಂದು ತಿಳಿಸಿದರು.

ಈ ವೇಳೆ ಎಸ್‌.ಎ ರವೀಂದ್ರನಾಥ್‌, ಮಾಡಾಳ್‌ ಮಲ್ಲಿಕಾರ್ಜುನ್‌, ರೈತ ಮುಖಂಡರಾದ ಬೆಳವನೂರು ನಾಗೇಶ್ವರರಾವ್‌, ಲೋಕಿಕೆರೆ ನಾಗರಾಜ್‌, ಚಂದ್ರಶೇಖರ್‌ ಪೂಜಾರ್‌, ಗೋಪನಾಳ್‌ ಕರಿಬಸಪ್ಪ, ಶಾಗಲೆ ಜಗದೀಶ್‌ಗೌಡ್ರು, ಗೋಣಿವಾಡ ಮಂಜುನಾಥ್‌, ಪಿ.ಎ.ನಾಗರಾಜಪ್ಪ, ವಡ್ನಾಳ್‌ ಸಿದ್ದೇಶ್‌, ಬಾತಿ ಶಿವಕುಮಾರ್‌, ಬಲ್ಲೂರು ಬಸವರಾಜು ಮತ್ತಿತರರಿದ್ದರು.

error: Content is protected !!