ನಗರದಲ್ಲಿ ಸಂಭ್ರಮದ ಗುರು ಪೂರ್ಣಿಮೆ

ನಗರದಲ್ಲಿ ಸಂಭ್ರಮದ ಗುರು ಪೂರ್ಣಿಮೆ

ತುಂತುರು ಮಳೆಯ ನಡುವೆಯೂ ಭಕ್ತಿ ನಮನ

ದಾವಣಗೆರೆ, ಜು. 21 – ನಗರದಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ಗುರು ಪೂರ್ಣಿಮೆ  ಆಚರಿಸಲಾಯಿತು. ಮಠ ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು. ತುಂತುರು ಮಳೆಯ ನಡುವೆಯೇ ಭಕ್ತಾದಿಗಳು ತಮ್ಮ ಗುರುವಿಗೆ ಭಕ್ತಿ ನಮನ ಸಲ್ಲಿಸಿದರು.

ಎಂ.ಸಿ.ಸಿ. `ಎ’ ಬ್ಲಾಕ್‌ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆದ ಗುರು ಪೂರ್ಣಿಮೆಯಲ್ಲಿ ಉದ್ಯಮಿ ಎಸ್.ಎಸ್. ಗಣೇಶ್ ಹಾಗೂ ಪತ್ನಿ ಶ್ರೀಮತಿ ರೇಖಾ ಗಣೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ನಗರದಲ್ಲಿ ಸಂಭ್ರಮದ ಗುರು ಪೂರ್ಣಿಮೆ - Janathavani

ಬೆಳಿಗ್ಗೆ ಶ್ರೀ ಬಾಬಾರವರ ಬೆಳ್ಳಿಯ ಮೂರ್ತಿಗೆ ಹಾಲಿನ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಸಾಯಿ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು. ರಾತ್ರಿ ಪಾಲಕಿ ಉತ್ಸವ, ಧುನಿ ಪೂಜೆ, ಶೇಜಾರತಿ ಮುಂತಾದ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ಸಾರ್ವಜನಿಕರು ಬೆಳ್ಳಿ ಮೂರ್ತಿಗೆ ಹಾಲಿನ ಅಭಿಷೇಕ ಮಾಡಲು ಅವಕಾಶ ನೀಡಲಾಗಿತ್ತು.

ಪಿ.ಜೆ. ಬಡಾವಣೆ ಹಾಗೂ ಕೊಂಡಜ್ಜಿ ರಸ್ತೆಯ ವಿಜಯ ನಗರ ಬಡಾವಣೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.

ಪಿ.ಜೆ. ಬಡಾವಣೆ ಹಾಗೂ ಕಸ್ತೂರಬಾ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲೂ ಸಹ ಗುರುರಾಯರಿಗೆ ವಿಶೇಷ ಪೂಜೆಗಳು ನಡೆದು, ವಿಶೇಷ ಅಲಂಕಾರ ಮಾಡಲಾಗಿತ್ತು.

ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್‌ನಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ  ನವಗ್ರಹ ಹೋಮ, ಶ್ರೀ ಸತ್ಯ ನಾರಾಯಣ ಸ್ವಾಮಿ ‌ಪೂಜಾ ಕಥಾ, ಶ್ರೀ ಮಾತಾ ಅನ್ನಪೂರ್ಣೇಶ್ವರಿಗೆ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನೆರವೇರಿತು.

ಜಯದೇವ ವೃತ್ತದಲ್ಲಿರುವ ಶ್ರೀ ಶಿವಾನಂದ ತೀರ್ಥಗುರು ಅಧ್ಯಾತ್ಮ ಮಂದಿರ, ಶ್ರೀ ಗುರು ದತ್ತಾತ್ರೇಯ ದೇವಾಲಯದಲ್ಲಿ ಶ್ರೀ ಗುರು ದತ್ತಾತ್ತೇಯ ಸ್ವಾಮಿಯ 38ನೇ ವಾರ್ಷಿಕೋತ್ಸವ ಪ್ರತಿಷ್ಠಾಪನಾ ಸುಸ್ಮರಣ ಮತ್ತು 108ನೇ ಶ್ರೀ ಸತ್ಯದತ್ತ ವ್ರತ ಮಹೋತ್ಸವ ಕಾರ್ಯಕ್ರಮ ನೆರವೇರಿತು.

ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಅಧ್ಯಾತ್ಮ ಸಂಸ್ಥೆ ಮತ್ತು ಗಾಯತ್ರಿ ಪರಿವಾರದಿಂದ ಜಯದೇವ ವೃತ್ತದಲ್ಲಿನ ಶ್ರೀ ಶಂಕರ ಮಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ, ಉಪಾಸನೆ ನೆರವೇರಿತು. ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಹಾಗೂ ಸಿದ್ಧ ಸಮಾಧಿ ಯೋಗ  ಸಂಯುಕ್ತಾ ಶ್ರಯದಲ್ಲಿ ಪಿ.ಬಿ. ರಸ್ತೆಯಲ್ಲಿರುವ ಗೀತಾ ಮಂದಿರದಲ್ಲಿ ಇಂದು ಗುರುಪೂರ್ಣಿಮೆ ಸಮಾರಂಭ ನೆರವೇರಿತು. 

ವಿವೇಕಾನಂದ ಬಡಾವಣೆಯಲ್ಲಿ ಆರ್.ಎಸ್.ಎಸ್.ನ ವಿದ್ಯಾನಗರ ಶಾಖೆ ವತಿಯಿಂದ ಮಾಗನೂರು ಬಸಪ್ಪ ಶಾಲೆಯಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ ನೆರವೇರಿಸಲಾಯಿತು. ಯಲ್ಲಮ್ಮ ನಗರದ ಶ್ರೀ ಸಿದ್ದಿವಿನಾಯಕ ಶಾಲೆಯಲ್ಲಿ ಆರ್‌.ಎಸ್‌.ಎಸ್‌ ವತಿಯಿಂದ ಗುರು ಪೂರ್ಣಿಮೆ ಮಹೋತ್ಸವ ಆಯೋಜಿಸಲಾಗಿತ್ತು.

error: Content is protected !!