ಹರಪನಹಳ್ಳಿ ನಿರ್ಗಮಿತ ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ ಕಳಕಳಿ
ಹರಪನಹಳ್ಳಿ,ಜು.19- ಅರಣ್ಯ ಸಂಪತ್ತು ಉಳಿದರೆ ಮಾತ್ರ ಮುಂದಿನ ಜೀವ ಸಂಕುಲವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ನಿರ್ಗಮಿತ ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ ಹೇಳಿದರು.
ಪಟ್ಟಣದ ತಾಲ್ಲೂಕು ವಲಯಅರಣ್ಯಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂಜೆ ಅರಣ್ಯ ಸಿಬ್ಬಂದಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ತಾಪಮಾನದಲ್ಲಿ ಏರುಪೇರು ಉಂಟಾಗುತ್ತಿರುವುದನ್ನು ನೋಡಿದರೆ ಇದು ಮುಂದೆ ಮಾನವ ಸಂಕುಲಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ, ಹಾಗಾಗಿ ನಾವೆಲ್ಲರೂ ಅರಣ್ಯ ಸಂಪತ್ತು ಉಳಿಸಿ ಬೆಳೆಸಲು ಮುಂದಾಗಬೇಕು ಎಂದರು.
ಹರಪನಹಳ್ಳಿಯಲ್ಲಿ ಕಳೆದ ಮೂರು ವರ್ಷಗಳಿಂದ ವಲಯ ಅರಣ್ಯ ಅಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸಿರುವುದು ನನಗೆ ತೃಪ್ತಿ ತಂದಿದ್ದು, ಸಿಬ್ಬಂದಿ ನನಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ನೂತನ ವಲಯ ಅರಣ್ಯಾಧಿಕಾರಿ ರಾಜು ಗೊಂದಕರ್ ಮಾತನಾಡಿ, ಮಲ್ಲಪ್ಪ ಅವರು ಉತ್ಸಾಹಿ ಜೀವಿ, ಸದಾ ಕ್ರಿಯಾಶೀಲರಾಗಿರುತ್ತಾರೆ, ಅವರ ಅನುಭವವೇ ನಮಗೆ ಸ್ಫೂರ್ತಿದಾಯಕ ಎಂದರು.
ನಿರ್ಗಮಿತ ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ ಅವರ ಕುರಿತು ಅನೇಕ ಸಿಬ್ಬಂದಿಗಳು ಅನಿಸಿಕೆ ವ್ಯಕ್ತಪಡಿಸಿದರು.
ವಿವಿಧ ಸಂಘ-ಸಂಸ್ಥೆ, ರಾಜಕೀಯ ಮುಖಂಡರು ಅರಣ್ಯಾಧಿಕಾರಿ ಕೆ.ಮಲ್ಲಪ್ಪ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಓ.ಮಹಾಂತೇಶ, ಅರಣ್ಯ ಸಿಬ್ಬಂದಿ ಮಂಜ್ಯಾನಾಯ್ಕ್, ರಾಘವೇಂದ್ರ, ಕೊಟ್ರಪ್ಪ, ವೀರೇಶ, ಕೇದಾರನಾಥ, ರೋಹನ್, ಕರಿಬಸಯ್ಯ, ಚನ್ನಬಸಪ್ಪ, ಸೋಮನಾಯ್ಕ್, ಪತ್ರೆಪ್ಪ ಸೇರಿದಂತೆ ಇತರರು ಇದ್ದರು.