ಶಿವಮೊಗ್ಗ, ಜು.19- ಮಲೆನಾಡಿನಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ತುಂಗಾ ಮತ್ತು ಭದ್ರಾ ನದಿಗಳಲ್ಲಿ ನೀರಿನ ಹರಿವು ಶುಕ್ರವಾರ ಇನ್ನಷ್ಟು ಹೆಚ್ಚಾಗಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ ಬಾರಿ ಪ್ರಮಾಣದ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಡ್ಯಾಮ್ನ ಎಲ್ಲಾ ಕ್ರೆಸ್ಟ್ ಗೇಟುಗಳನ್ನು ತೆರೆದು ನದಿಗೆ ಬೀಡಲಾಗಿದೆ. ಇದರಿಂದಾಗಿ ತುಂಗಭದ್ರಾ ನದಿಯಲ್ಲಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ಪ್ರವಾಹ ಭೀತಿ ಸೃಷ್ಟಿಸಿದೆ.
ಭದ್ರಾ ಒಳ ಹರಿವು ಇನ್ನಷ್ಟು ಹೆಚ್ಚಳ : ಭದ್ರಾ ಜಲಾಶಯಕ್ಕೆ ಗುರುವಾರ 45 ಸಾವಿರ ಕ್ಯೂಸೆಕ್ಸ್ ಇದ್ದ ಒಳ ಹರಿವು ಶುಕ್ರವಾರ 50 ಸಾವಿರ ಕ್ಯೂಸೆಕ್ಸ್ಗೆ ಏರಿಕೆ ಆಗಿತ್ತು. ಶುಕ್ರವಾರ ಸಂಜೆ ಜಲಾಶಯದ ನೀರಿನ ಮಟ್ಟ 160 ಅಡಿ ದಾಟಿದ್ದು, ಕಳೆದ ವರ್ಷ ಈ ದಿನ ಜಲಾಶಯದಲ್ಲಿ 141 ಅಡಿ ನೀರಿತ್ತು. ಜಲಾಶಯದ ಗರಿಷ್ಟ ಮಟ್ಟ 186 ಅಡಿಗಳಾಗಿದ್ದು ಜಲಾಶಯ ಭರ್ತಿಗೆ 26 ಅಡಿ ಮಾತ್ರ ಬಾಕಿ ಇದೆ.