ದಾವಣಗೆರೆ, ಜು. 16- ಕೊಲೆ ನಡೆದ ಆರು ತಾಸಿನಲ್ಲಿಯೇ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರಾಕಾರ ಮಳೆಯಲ್ಲಿಯೂ ಪೊಲೀಸ್ ಶ್ವಾನ ತುಂಗಾ-2 ಆರೋಪಿ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಜು.15ರ ರಾತ್ರಿ 9.30 ಗಂಟೆ ಸುಮಾರಿಗೆ ಸಂತೇಬೆನ್ನೂರು ಗ್ರಾಮದ ಸಂತೇಬೆನ್ನೂರು-ದಾವಣಗೆರೆ ಮುಖ್ಯರಸ್ತೆಯ ಹಿಂದುಸ್ಥಾನ್ ಪೆಟ್ರೋಲಿಯಂ ಪಂಪ್ ಎದುರಿನ ರಸ್ತೆಯಲ್ಲಿ ಸಂತೇಬೆನ್ನೂರು ಗ್ರಾಮದ ಸಂತೋಷ (36) ಎಂಬಾತನನ್ನು ದುಷ್ಕರ್ಮಿಗಳು ಮಚ್ಚಿನಿಂದ ಬರ್ಬರವಾಗಿ ಹಲ್ಲೆ ಮಾಡಿದ್ದರು.
ಘಟನೆ ನಡೆದ ಕೆಲವೇ ಕ್ಷಣದಲ್ಲಿ ಹೆದ್ದಾರಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಕೊಲೆ ನಡೆದ ಸ್ಥಳಕ್ಕೆ ಆಗಮಿಸಿದ್ದರು. ಕೊಲೆ ಆರೋಪಿ ಪತ್ತೆಗಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಚನ್ನಗಿರಿ ತಾಲ್ಲೂಕು ಚನ್ನಾಪುರ ಗ್ರಾಮದ ಶ್ರೀರಂಗಸ್ವಾಮಿ (32) ಎಂಬಾತನನ್ನು ಬಂಧಿಸಿದ್ದಾರೆ.
ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ಕೋಪಗೊಂಡು ಸಂತೋಷನನ್ನು ಕೊಲೆ ಮಾಡಿರುವುದಾಗಿ ತಿಳಿದು ಬಂದಿದ್ದು, ನಂತರ ತನ್ನ ಪತ್ನಿಯ ಕೊಲೆಗೂ ಸಂಚು ನಡೆಸಿದ ವಿಷಯ ಬೆಳಕಿಗೆ ಬಂದಿದೆ. ಇದೀಗ ಆರೋಪಿ ಬಂಧನದಿಂದಾಗಿ ಮತ್ತೊಂದು ಕೊಲೆ ತಡೆದಂತಾಗಿದೆ.
ಆರೋಪಿ ಪತ್ತೆಗೆ ಶ್ರಮಿಸಿದ ಸಂತೇಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು, ಸಂತೇ ಬೆನ್ನೂರು ಠಾಣೆ ಪಿ.ಎಸ್.ಐ ಶ್ರೀಮತಿ ರೂಪಾ ತೆಂಬದ್ ಹಾಗೂ ಚನ್ನವೀರಪ್ಪ ಹಾಗೂ ಸಿಬ್ಬಂದಿಗ ಳಾದ ರವಿ, ರಾಘವೇಂದ್ರ, ಕಣ್ಣಪ್ಪ, ಕುಮಾರ ನಾಯ್ಕ, ನಾಗಭೂಷಣ, ಸತೀಶ ಜಿ.ಆರ್, ರುದ್ರೇಶ್ ಎಂ., ಪರಶುರಾಮ ಚಾಲಕರುಗಳಾದ ರಘು, ರವಿ, ಸೋಮಶೇಖರ್, ಶ್ವಾನ ದಳದ ಶಫಿವುಲ್ಲಾ ಎಂ.ಡಿ, ದರ್ಗಾನಾಯ್ಕ ಇವರುಗಳ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲ್ಯಾಘಿಸಿದ್ದಾರೆ.