ದಾವಣಗೆರೆ, ಜು. 16 – ವಿದ್ಯಾರ್ಥಿ ಜೀವನ ಅತ್ಯಂತ ಪವಿತ್ರವು ಸುಂದರವೂ ಆಗಿರುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ನಿಶ್ಚಿತ ಗುರಿಯೊಂದಿಗೆ ಅಭ್ಯಾಸ ಮಾಡಿದಾಗ ಸುಲಭವಾಗಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಅಭಿಪ್ರಾಯಪಟ್ಟರು.
ನಗರದ ಮುದೇಗೌಡ್ರ ಮಲ್ಲಮ್ಮ, ಮುರಿಗೆಪ್ಪ ಬಾಲಕಿಯರ ಪ್ರೌಢಶಾಲೆ, ಶ್ರೀ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮುದೇಗೌಡ್ರ ದ್ರಾಕ್ಷಾಯಣಮ್ಮ ಷಡಕ್ಷರಿ ಯಪ್ಪ ನರ್ಸರಿ ಶಾಲೆಗಳ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಅಭ್ಯಾಸಕ್ಕೆ ಹಿಂದೆ ಗುರು, ಮುಂದೆ ಗುರಿ ಇದ್ದಾಗ ಮಾತ್ರ ಸಾಧನೆಗೆ ಪೂರಕವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಕಠಿಣ ಶ್ರಮದ ಜೊತೆಗೆ ಆದರ್ಶ ವ್ಯಕ್ತಿಗಳ ಜೀವನ ಅಧ್ಯಯನದಿಂದ ಉನ್ನತ ಸಾಧನೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಕಡು ಬಡತನದಲ್ಲಿ ಹುಟ್ಟಿದ ರಾಷ್ಟ್ರದ ಉನ್ನತ ಪದವಿ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಎಪಿಜೆ ಅಬ್ದುಲ್ ಕಲಾಂ ಮತ್ತು ಡಾ. ಸರ್. ಎಂ. ವಿಶ್ವೇಶ್ವರಯ್ಯ ಅವರ ಸಂಕ್ಷಿಪ್ತ ಜೀವನ ಮತ್ತು ಸಾಧನೆಯನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿ, ತಾವುಗಳೂ ಸಹ ಅಂತಹ ಸಾಧಕರಾಗಬೇಕೆಂದು ತಿಳಿಸಿದರು. ಕಲಿಕೆಗೆ ಯಾವುದೇ ಬಡತನ ಅಡ್ಡಿಯಾಗುವುದಿಲ್ಲ. ತಾವುಗಳು ಸಾಧನೆ ಇಲ್ಲದೇ ಸತ್ತರೆ ಅದು ಸಾವಿಗೆ ಅವಮಾನ ಎಂಬ ಮಾತಿದೆ. ಆ ಕಾರಣಕ್ಕಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗುರುತರವಾದ ಸಾಧನೆ ಮಾಡುವ ಕನಸನ್ನು ಚಿಕ್ಕ ವಯಸ್ಸಿನಲ್ಲಿ ಹೊಂದಿರಿ ಎಂಬುದಾಗಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಡಜ್ಜಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಲ್. ಪರಮೇಶ್ವರಪ್ಪ ಜಿಜಿಎಂಎಸ್ ಶಾಲೆಯ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಎಸ್.ಹೆಚ್. ಶ್ರೀ ಬಂಕಾಪುರದ ನಂಜುಂಡಪ್ಪ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಆರ್. ಪರಮೇಶ್ವರಪ್ಪ ವಿಶ್ರಾಂತ ದೈಹಿಕ ಶಿಕ್ಷಕ ಬಿ. ಶಿವಪ್ಪ ಕೊಪ್ಪದ ಸಭೆಯನ್ನು ಉದ್ದೇಶಿಸಿ ಸಾಂದರ್ಭಿಕವಾದ ಹಿತ ನುಡಿಗಳನ್ನು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಬಿ.ಎಚ್. ವಿರೂಪಾಕ್ಷಪ್ಪ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ನಮ್ಮ ಸರ್ವತೋಮುಖ ಅಭಿವೃದ್ಧಿಗೆ ಕಾರಣಿ ಭೂತರಾಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಜಯಪ್ಪ, ದಿನೇಶ್ ಮತ್ತು ಇತರರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಾಲಾ ಸಂಸತ್ತಿನ ಕಾರ್ಯದರ್ಶಿ ಕು. ಲಾವಣ್ಯ ನಿರೂಪಿಸಿದರು. ಪ್ರತಿನಿಧಿ ಕು. ಅಕ್ಷತಾ ವಂದಿಸಿದರು.