ದಾವಣಗೆರೆ,ಜು.14- ಔಷಧಿ ವ್ಯಾಪಾರೋದ್ಯಮದಲ್ಲಿ ಸುದೀರ್ಘ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಗರದ ವರ್ತಕರೂ, ದಾನಿಗಳೂ ಆಗಿರುವ ಪೋಪಟ್ಲಾಲ್ ಜೈನ್ ಅವರು, ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ವಿಶೇಷ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಮಡಿಕೇರಿಯ ಗೌಡ ಸಮಾಜ ಭವನದ ಸಭಾಂಗಣದಲ್ಲಿ ಕಳೆದ ವಾರ ನಡೆದ ಸಂಘದ ತ್ರೈವಾರ್ಷಿಕ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪೋಪಟ್ಲಾಲ್ ಜೈನ್ ಅವರನ್ನು ಗೌರವಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ರಘುನಾಥ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಏರ್ಪಾಡಾಗಿದ್ದ ಈ ಸಮಾರಂಭದಲ್ಲಿ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ್ ಸಿಂಧೆ ಅವರು ಪೋಪಟ್ಲಾಲ್ ಜೈನ್ ಅವರಿಗೆ ಶಾಲು ಹೊದಿಸಿ, ಫಲ-ಪುಷ್ಪಗಳೊಂದಿಗೆ ಸ್ಮರಣಿಕೆ ನೀಡಿ ಸನ್ಮಾನಿಸುವುದರ ಮೂಲಕ ವಿಶೇಷ ಪುರಸ್ಕಾರವನ್ನು ಪ್ರದಾನ ಮಾಡಿದರು.
ಪೋಪಟ್ಲಾಲ್ ಜೈನ್ ಅವರು ದಾವಣಗೆರೆಯಲ್ಲಿ ಬಾಲಾಜಿ ಫಾರ್ಮ ಮಾಲೀಕರಾಗಿದ್ದು, ಸುದೀರ್ಘ 50 ವರ್ಷಗಳಿಂದ ಔಷಧಿ ವ್ಯಾಪಾರೋದ್ಯಮವನ್ನು ನಡೆಸುತ್ತಿದ್ದಾರೆ. ಜೊತೆ-ಜೊತೆಗೆ ಆಶಾಕಿರಣ ಅಂಗವಿಕಲ ಹಾಗೂ ಬುದ್ದಿಮಾಂಧ್ಯ ಮಕ್ಕಳ ಶಾಲೆಯನ್ನು ನಡೆಸುತ್ತಿದ್ದಾರೆ. ಹಲವಾರು ಸಾಮಾಜಿಕ ಸೇವಾ ಸಂಸ್ಥೆಗಳ ಸಕ್ರಿಯ ಪದಾಧಿಕಾರಿಗಳಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಡ ಜನರಿಗೆ ಆರ್ಥಿಕ ಮತ್ತು ಸಮಾಜದ ಅಗತ್ಯ ಸೇವೆಗಳಿಗೆ ನೆರವು ನೀಡುವುದರೊಂದಿಗೆ ದಾನಿಯೂ ಆಗಿದ್ದಾರೆ. ಅವರ ವೃತ್ತಿ ಜೀವನ ಮತ್ತು ಸಾಮಾಜಿಕ ಸೇವೆ ಹಾಗೂ ವ್ಯಕ್ತಿತ್ವವನ್ನು ಸಮಾರಂಭದಲ್ಲಿ ಗಣ್ಯರು ಮೆಲಕು ಹಾಕುವುದರೊಂದಿಗೆ ಅಭಿನಂದಿಸಿದರು.
ಮೂಲತಃ ರಾಜಸ್ಥಾನದವರಾದ ಪೋಪಟ್ಲಾಲ್ ಜೈನ್ ಅವರ ಪೂರ್ವಿಕರು ವ್ಯಾಪಾರವನ್ನು ಅರಸಿ ದಾವಣಗೆರೆಯತ್ತ ಆಗಮಿಸಿದ್ದರು. ಪೋಪಟ್ಲಾಲ್ ಜೈನ್ ಅವರು ದಾವಣಗೆರೆಯಲ್ಲೇ ಹುಟ್ಟಿ ಬೆಳೆದಿದ್ದು, ಅವರು ಕನ್ನಡ ಭಾಷೆ, ನೆಲ-ಜಲದ ಬಗ್ಗೆ ಹೊಂದಿರುವ ಕಳಕಳಿ ಮತ್ತು ಅದಕ್ಕಾಗಿ ನಡೆಸಿದ ಹೋರಾಟವನ್ನು ಗಣ್ಯರು ಕೊಂಡಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದ ಗೌರವ ಕಾರ್ಯದರ್ಶಿ ರಾಜೀವ್ ಸಿಂಘಲ್, ಕರ್ನಾಟಕ ರಾಜ್ಯ ಔಷಧಿ ನಿಯಂತ್ರಕರಾದ ಬಿ.ಟಿ. ಖಾನಾಪುರೆ, ರಾಜ್ಯ ಉಪ ಔಷಧಿ ನಿಯಂತ್ರಕರಾದ ಕೆಂಪಯ್ಯ ಸುರೇಶ್ ಮತ್ತು ಇತರರು ಮಾತನಾಡಿದರು. ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಅಂಬೆಕಲ್ ಜೀವನ್, ರಾಜ್ಯ ಸಂಘದ ಖಜಾಂಚಿ ಉಮೇಶ್, ದಾವಣಗೆರೆ ಜಿಲ್ಲಾ ಸಂಘದ ಕಾರ್ಯದರ್ಶಿ ಪ್ರಸನ್ನ ಕುಮಾರ್, ಸದಸ್ಯರುಗಳಾದ ರವಿಚಂದ್ರ ನಾಯ್ಕ್, ಜೆ.ಎಸ್. ಲೋಕೇಶ್, ಬಿ.ಆರ್. ಗೋಪಾಲಕೃಷ್ಣ, ಬಿ.ನಾಗರಾಜ್, ಎಸ್. ರವಿಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.