ರವೀಂದ್ರನಾಥ್ ಬಡಾವಣೆ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ : ಎಚ್ಚರಿಕೆ

ದಾವಣಗೆರೆ, ಜು. 14- ನಗರದ ಹೊರ ವಲಯದ ಲೋಕಿಕೆರೆ ರಸ್ತೆಯಲ್ಲಿನ ಎಸ್.ಎ. ರವೀಂದ್ರನಾಥ್ ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಶೆಡ್ ತೆರವು, ಅಂಗನವಾಡಿ ಕೇಂದ್ರ ಸ್ಥಾಪನೆ, ಪಾಲಿಕೆಯ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಕುರಿತಂತೆ ಕಂದಾಯ ಸಚಿವರು ಸೂಚಿಸಿರುವಂತೆ ಮುಂಬರುವ ಒಂದು ತಿಂಗಳೊಳಗಾಗಿ ಅನುಪಾಲನ ವರದಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಸ್.ಎ. ರವೀಂದ್ರನಾಥ ನಗರದ ನಾಗರಿಕ ಹಿತರಕ್ಷಣಾ ಸಮಿತಿ ಎಚ್ಚರಿಕೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಎನ್. ಸಿದ್ದರಾಮಪ್ಪ ಮಾತನಾಡಿ, 2021-22 ನೇ ಸಾಲಿನಲ್ಲಿ ನಿರ್ಮಾಣಗೊಂಡ ರವೀಂದ್ರನಾಥ್ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವ ಬಗ್ಗೆ ಜಿಲ್ಲಾಧಿಕಾರಿ, ಪಾಲಿಕೆ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಿರಿಸಿದ ಜಾಗದಲ್ಲಿ ಅಕ್ರಮ ಶೆಡ್ಡುಗಳನ್ನು ಹಾಕಲಾಗಿದ್ದು, ಈ ಕೂಡಲೇ ತೆರವು ಮಾಡಬೇಕೆಂದು ಒತ್ತಾಯಿಸಿದರು.

ಬಡಾವಣೆಯ ಖಾಲಿ ನಿವೇಶನದಲ್ಲಿ ಅಂಗನವಾಡಿ ಕೇಂದ್ರ, ವಾಚನಾಲಯ ನಿರ್ಮಿಸಲು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ಮೀಸಲು ನಿವೇಶನಗಳನ್ನು ನಗರ ಆಶ್ರಯ ಸಮಿತಿ ಮುಖಾಂತರ ಅರ್ಹರಲ್ಲದ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದು, ಈ ಕುರಿತು ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. 

ಈ ಮಧ್ಯೆ ಪಾಲಿಕೆಯ ನಿವೇಶನದ ಸುತ್ತ ತಂತಿ ಬೇಲಿ ಹಾಕಿರುವುದು ನಾಗರಿಕರಲ್ಲಿ ಸಂಶಯ ಉಂಟು ಮಾಡಿದೆ ಎಂದರು.

ಮೀಸಲಿಟ್ಟ ಜಾಗದಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸುವಂತೆ ಪಾಲಿಕೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಮನವಿಯನ್ನು ನಿರ್ಲಕ್ಷೆ ಮಾಡಿ ಪಾಲಿಕೆಯು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದೆ. ಇದಕ್ಕೆ ನಾಗರಿಕ ಹಿತ ರಕ್ಷಣಾ ಸಮಿತಿ ವಿರೋಧ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಎಸ್.ಮಲ್ಲನಗೌಡ, ಎಸ್.ಆರ್. ಸೋಮಶೇಖರಪ್ಪ, ಎನ್.ಎಸ್. ಮಹೇಶ್ವರಪ್ಪ, ಬಿ. ಕರಿಬಸಪ್ಪ, ಬಿ. ಚಂದ್ರೇಗೌಡ, ಎನ್. ವೀರಭದ್ರಪ್ಪ ಉಪಸ್ಥಿತರಿದ್ದರು. 

error: Content is protected !!