ಹೊನ್ನಾಳಿ : ಸುಂಕದ ಕಟ್ಟೆ ಯಾತ್ರಿ ನಿವಾಸದ ಕಥೆ-ವ್ಯಥೆ..!

ಹೊನ್ನಾಳಿ : ಸುಂಕದ ಕಟ್ಟೆ ಯಾತ್ರಿ ನಿವಾಸದ ಕಥೆ-ವ್ಯಥೆ..!

`ದನದ ಕೊಟ್ಟಿಗೆಯಂತಾಗಿರುವ ಯಾತ್ರಿ ನಿವಾಸ   ರಾತ್ರಿ ಮದ್ಯ ವ್ಯಸನಿಗಳ ತಾಣವಾಗಿ ಬದಲಾಗುತ್ತದೆ’   ದೂರುಗಳ ಸುರಿಮಳೆಗೈಯ್ದ ಗ್ರಾಮಸ್ಥರು.

ಹೊನ್ನಾಳಿ, ಜು.14-  ತಾಲ್ಲೂಕಿನ ಸುಂಕದಕಟ್ಟೆಯಲ್ಲಿರುವ ಯಾತ್ರಿ ನಿವಾಸವು ಸಾರ್ವಜನಿಕರಿಗೆ ಬಳಕೆಯಾಗುತ್ತಿಲ್ಲವೆಂದು ಸುಂಕದಕಟ್ಟೆಯ ಗ್ರಾಮಸ್ಥರು, ತಹಶೀಲ್ದಾರ್ ಪಟ್ಟರಾಜೇಗೌಡರಿಗೆ ಮೌಖಿಕವಾಗಿ ದೂರು ನೀಡಿದ ಹಿನ್ನೆಲೆಯಲ್ಲಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಲ್.ಪಿ. ಮಧುಗೌಡ ಮತ್ತು ಅವರ ತಂಡದ ಅಧಿಕಾರಿಗಳು ಸುಂಕದಕಟ್ಟೆ ಗ್ರಾಮಕ್ಕೆ ಗುರುವಾರ ಮಧ್ಯಾಹ್ನ ಭೇಟಿ ನೀಡಿ ಯಾತ್ರಿ ನಿವಾಸವನ್ನು ಪರಿಶೀಲನೆ ಮಾಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಪ್ರಸಂಗ ನಡೆಯಿತು.

ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಬಂದಿರುವ ವಿಷಯ ತಿಳಿದು ಗ್ರಾಮಸ್ಥರು ಯಾತ್ರಿ ನಿವಾಸಕ್ಕೆ ಸಂಬಂಧಪಟ್ಟಂತೆ,  ಮಧುಗೌಡರಿಗೆ ಯಾತ್ರಿ ನಿವಾಸವು ದನದ ಕೊಟ್ಟಿಗೆಯಂತೆ ಬಳಕೆಯಾಗುತ್ತಿದ್ದು, ತಡರಾತ್ರಿ ಮದ್ಯ ವ್ಯಸನಿಗಳ ತಾಣವಾಗಿ ಬದಲಾಗುತ್ತದೆ ಎಂದು ದೂರುಗಳ ಸುರಿಮಳೆಗೈಯ್ದರು.

ಈ ಸಂದರ್ಭದಲ್ಲಿ ಗ್ರಾಮದ ಮೋಹನ್ ಮಾತನಾಡಿ, ಯಾತ್ರಿ ನಿವಾಸದ ಕಟ್ಟಡವು ನಿರ್ಮಾಣವಾದಾಗಿನಿಂದ ಇಲ್ಲಿಯವರೆಗೂ ಸಾರ್ವಜನಿಕರ ಬಳಕೆಗೆ ಲಭ್ಯವಾಗಿತ್ತು. ಕಳೆದ 1 ವರ್ಷದಿಂದ ದೇವಸ್ಥಾನದ ಸಮಿತಿಯವರು ತುಂಗಾ ಎಡದಂಡೆ ನಾಲೆ ಆಧುನೀಕರಣದ ಕಾಮಗಾರಿ ನಡೆಯುತ್ತಿರುವ ಕಾರ್ಮಿಕರಿಗೆ ತಂಗಲು ಈ ಯಾತ್ರಿ ನಿವಾಸವನ್ನು ಬಾಡಿಗೆಗೆ ಕೊಟ್ಟಿದ್ದರು, ಬಾಡಿಗೆ ಪಡೆದಿರುವ ಲೆಕ್ಕವನ್ನು ಗ್ರಾಮಸ್ಥರು ಕೇಳಿದ್ದಕ್ಕೆ   ಸಮಿತಿಯವರು ಲೆಕ್ಕ ಕೊಡದೇ ಯಾತ್ರಿ ನಿವಾಸದ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದು, ಒಂದು ವರ್ಷದಿಂದ ಯಾತ್ರಿ ನಿವಾಸದ ಕೊಠಡಿಗಳಿಗೆ ಬೀಗ ಹಾಕಿದ್ದಾರೆಂದು ದೂರಿದರು.

ರಾಜ್ಯದಲ್ಲೇ ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ನರಸಿಂಹಸ್ವಾಮಿ ದೇವಾಲಯವು ಎರಡನೇ ಧರ್ಮಸ್ಥಳವೆಂದೇ ಖ್ಯಾತಿ ಪಡೆದಿದ್ದು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿದೆ, ದೇವಸ್ಥಾನದ ಹುಂಡಿಗೂ ಕೂಡ ಸಾಕಷ್ಟು ಹಣ ಹರಿದು ಬರುತ್ತಿದ್ದು, ನಾಡಿನ ಮೂಲೆ-ಮೂಲೆಗಳಿಂದ ಭಕ್ತಾದಿಗಳು ತಮ್ಮ ಹರಕೆ ತೀರಿಸಿಕೊಳ್ಳಲು ದೇವಸ್ಥಾನಕ್ಕೆ ಬರುತ್ತಾರೆ, ಬಂದ ಭಕ್ತರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲದಂತಾಗಿದೆ. 

10 ಕೊಠಡಿಗಳು ಇರುವ ಯಾತ್ರಿ ನಿವಾಸವನ್ನು ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡ ಬೇಕೆಂದು ನೆರೆದಿದ್ದ ಭಕ್ತಾದಿಗಳು, ಸಾರ್ವಜನಿಕರು ಮನವಿ ಮಾಡಿದರು. ದೇವಸ್ಥಾನವು ಎ-ಗ್ರೇಡ್ ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಡುತ್ತಿದ್ದು ಇದಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಅವರು ಒತ್ತಾಯಿಸಿದರು.

ಅರಬಗಟ್ಟೆಯ ಗ್ರಾಪಂ ಅಧ್ಯಕ್ಷ ಡಿ.ಬಿ.ಶ್ರೀನಿವಾಸ್ ಮಾತನಾಡಿ, ಯಾತ್ರಿ ನಿವಾಸ ನಿರ್ಮಾಣದ ಜಾಗವು ಪಂಚಾಯ್ತಿಯವರಿಗೆ ಸೇರಿದ್ದು, ನಿರ್ಮಿತಿ ಕೇಂದ್ರದವರು ಪಂಚಾಯ್ತಿಗೆ ಕಟ್ಟಡವನ್ನು ಹಸ್ತಾಂತರಿಸದೇ ಏಕಾಏಕಿ ದೇವಸ್ಥಾನ ಸಮಿತಿಯವರಿಗೆ  ಹಸ್ತಾಂತರಿಸಿದ್ದು ಸರಿಯಾದ ಕ್ರಮವಲ್ಲವೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಹಿರಿಯರಾದ ಎಸ್.ಜಿ.ಮಂಜಪ್ಪ ಅವರು ಯಾತ್ರಿ ನಿವಾಸವನ್ನು ಸಾರ್ವ ಜನಿಕರ ಬಳಕೆಗೆ ಬಿಟ್ಟುಕೊಡುವ ವಿಚಾರದಲ್ಲೂ ರಾಜಕೀಯ ಹಸ್ತಕ್ಷೇಪವಾಗುತ್ತಿದ್ದು, ತಕ್ಷಣವೇ ಸಾರ್ವಜನಿಕರ, ದೇವಾಲಯದ ಭಕ್ತರ ಅನುಕೂ ಲಕ್ಕಾಗಿ ಯಾತ್ರಿ ನಿವಾಸವು ಬಳಕೆಯಾಗುವ ನಿಟ್ಟಿನಲ್ಲಿ ಅಧಿಕಾರಿಗಳು  ಕ್ರಮ ಜರುಗಿಸ ಬೇಕೆಂದು ಒತ್ತಾಯಿಸಿದ್ದು ಗಮನ ಸೆಳೆಯಿತು.

ಸಹಾಯಕ ನಿರ್ದೇಶಕ ಮಧುಗೌಡ ಅವರು ಗ್ರಾಮಸ್ಥರ ಸಮಸ್ಯೆಗಳ ನ್ನಾಲಿಸಿ ಮಾತನಾಡಿ, ಪ್ರವಾಸಿ ತಾಣಗಳನ್ನು ಹೆಚ್ಚು ಪ್ರಚಾರ ಮಾಡಬೇಕು ಎಂದು ಇಲಾಖೆಯ ಆದೇಶವಾಗಿದ್ದು, ಹೊನ್ನಾಳಿ ತಹಶೀಲ್ದಾರ್ ಅವರ ಸೂಚನೆ ಮೇರೆಗೆ ಇಲ್ಲಿಗೆ ಸಮಸ್ಯೆಗಳನ್ನು ಬಗೆಹರಿಸಲು ಬಂದಿದ್ದು ಅತೀ ಶೀಘ್ರದಲ್ಲೇ ಯಾತ್ರಿ ನಿವಾಸವನ್ನು ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಯಾತ್ರಿ ನಿವಾಸಕ್ಕೆ ಪ್ರತೀ ವರ್ಷ ಸಮಿತಿಯವರು 1,000 ರೂ.ಗಳಂತೆ  10 ವರ್ಷಗಳಿಗೆ ಸರ್ಕಾರಿ ಯಾತ್ರಿ ನಿವಾಸದ ಆವರ್ತ ನಿಧಿಗೆ ಹಣ ಜಮಾ ಮಾಡಬೇಕು. ಇದೆಲ್ಲದರ ಬಗ್ಗೆ ದೇವಸ್ಥಾನದ ಸಮಿತಿಯವರಿಗೆ ನಾಳೆಯೇ ಪತ್ರ ವ್ಯವಹಾರ ಮಾಡಿ ಮಾಹಿತಿ ಪಡೆಯುತ್ತೇನೆಂದು ತಿಳಿಸಿದರು.

ದೇವಸ್ಥಾನದ ಸಮಿತಿ ಅಧ್ಯಕ್ಷ ಎಸ್.ಕೆ.ನರಸಿಂಹಮೂರ್ತಿ ಅವರಿಗೆ ದೂರವಾಣಿ ಕರೆ ಮಾಡಿ, ಸೂಕ್ತ ದಾಖಲೆಗಳ ಸಮೇತ ಕಚೇರಿಗೆ ಬಂದು ಭೇಟಿಯಾಗುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಜಹೀರ್ ಖಾನ್, ಜಿಲ್ಲಾ ಪ್ರವಾಸೋದ್ಯಮ ಪ್ರವರ್ತಕ ರುದ್ರೇಶ್, ಗ್ರಾಮದ ಶ್ರೀಕಾಂತ್, ರವಿ, ಪರಮೇಶ್, ಮೋಹನ್ ಕುಮಾರ್, ಹಳದಪ್ಪ, ಎ.ಕೆ.ರಂಗನಾಥ್, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಮಾರಿಕೊಪ್ಪ ಗ್ರಾಮಕ್ಕೆ ಭೇಟಿ ನೀಡುವಿರಾ? ಎಂದು ನಮ್ಮ ಪ್ರತಿನಿಧಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಪ್ರತಿಕ್ರಿಯಿಸಿದ ಅಧಿಕಾರಿಗಳು ಅಲ್ಲಿಗೆ ಈ ಹಿಂದೆ ಭೇಟಿ ನಾಲ್ಕು ಬಾರಿ ಭೇಟಿ ನೀಡಿದ್ದು, ಅಲ್ಲಿಯ ಪರಿಸ್ಥಿತಿಯೇ ಬೇರೆ ಇದೆ. ಮಾರಿಕೊಪ್ಪಕ್ಕೆ ಈಗ ಭೇಟಿ ನೀಡುತ್ತಿಲ್ಲ ಎಂದು ತಿಳಿಸಿದರು. 

ಪ್ರವಾಸೋದ್ಯಮ ಇಲಾಖೆಯ ಉದ್ದೇಶದಂತೆ ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ಯಾತ್ರಿ ನಿವಾಸದಲ್ಲಿ ಶೀಘ್ರವೇ ಸೌಲಭ್ಯ ದೊರೆಯಬೇಕೆಂಬುದು ಎಲ್ಲರ ಆಶಯವಾಗಿದೆ.

– ಮೃತ್ಯುಂಜಯ ಪಾಟೀಲ್

error: Content is protected !!