ಹರಿಹರ, ಜು.14- 7ನೇ ವೇತನ ಆಯೋಗ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ತಾಲ್ಲೂಕು ಸರ್ಕಾರಿ ನೌಕರರು ನಗರದಲ್ಲಿ ಇಂದು ಪ್ರತಿಭಟನೆ ಮಾಡಿ, ಶಾಸಕ ಬಿ.ಪಿ. ಹರೀಶ್ ಮತ್ತು ತಹಶೀಲ್ದಾರ್ ಗುರುಬಸವರಾಜ್ ರವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮುಖಂಡರು ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘವು ಸುಮಾರು 6 ಲಕ್ಷ ನೌಕರರನ್ನು ಹೊಂದಿರುವ ಬೃಹತ್ ಸಂಘವಾಗಿದೆ. ಸಂಘದಲ್ಲಿ ಇರುವಂತಹ ನೌಕರರು ಪ್ರಕೃತಿ ವಿಕೋಪ, ಹಾಗೂ ಕೋವಿಡ್ ಸಮಯದಲ್ಲಿ ಸರ್ಕಾರಕ್ಕೆ ಆರ್ಥಿಕ ಸಹಕಾರ ನೀಡಿ, ಸೇವಾ ಕಾರ್ಯವನ್ನು ನಿರ್ವಹಿಸುವ ಮೂಲಕ ದೇಶದಲ್ಲಿಯೇ ಮಾದರಿಯಾಗಿದ್ದಾರೆ.
ರಾಜ್ಯದ ಅಭಿವೃದ್ಧಿ ಸೂಚ್ಯಂಕದ ಬೆಳವಣಿಗೆಯಲ್ಲಿ ಹಾಗೂ ಜಿ.ಎಸ್.ಟಿ. ತೆರಿಗೆ ಸಂಗ್ರಹಣೆಯಲ್ಲಿ ದೇಶಕ್ಕೆ ಮಾದರಿಯಾಗುವಲ್ಲಿ ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ.
ಇಂತಹ ಕಾರ್ಯಾಂಗದ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ. ಆದ್ದರಿಂದ ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರಿ ಆದೇಶವನ್ನು ಹೊರಡಿಸಬೇಕು ಮತ್ತು ಎನ್.ಪಿ.ಎಸ್. ರದ್ದುಪಡಿಸಿ, ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಹಾಗೂ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದರು.
ಸರ್ಕಾರಿ ನೌಕರರ ಈ ಮೂರು ನ್ಯಾಯಯುತ ಬೇಡಿಕೆಗಳನ್ನು ಜಾರಿಗೊಳಿಸುವಲ್ಲಿ ಈಗಾಗಲೇ ಸಾಕಷ್ಟು ವಿಳಂಬವನ್ನು ಮಾಡಿದ್ದು, ಶೀಘ್ರವಾಗಿ ಜಾರಿಗೊಳಿಸಲು ಮುಂದಾಗಬೇಕು. ತಡ ಮಾಡಿದರೆ, ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾದ ಹೋರಾಟಕ್ಕೆ ನೌಕರರ ಸಂಘ ಮುಂದಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಮುಖಂಡರಾದ ರೇವಣಸಿದ್ದಪ್ಪ ಅಂಗಡಿ, ತಾಪಂ ಇಓ ರಾಮಕೃಷ್ಣಪ್ಪ, ಬಿ.ಇ.ಓ ಹನುಮಂತಪ್ಪ, ಡಾ ಅಬ್ದುಲ್ ಖಾದರ್, ಎಂ. ಉಮ್ಮಣ್ಣ, ಶಿವಮೂರ್ತಿ, ಈಶಪ್ಪ ಬೂದಿಹಾಳ, ಮಂಜುನಾಥ್, ನಸ್ರುಲ್ಲಾ, ಚಂದ್ರಪ್ಪ ದೊಗ್ಗಳ್ಳಿ, ಡಾ ವಿಶ್ವನಾಥ್, ಪ್ರಕಾಶ್, ದಾದಾಪೀರ್, ಸುಧಾ ಸಳಕೆ, ಎನ್.ಪಿ.ಎಸ್. ಸಂಗಣ್ಣ ಕರಡಿ, ನಿವೃತ್ತ ನೌಕರರಾದ ಎಂ. ವಿ. ಹೊರಕೇರಿ, ಎ.ಕೆ. ಭೂಮೇಶ್, ವಸಂತ, ಯಾಸೀನ್, ರವಿಕುಮಾರ್, ಹಾಗೂ ಇತರರು ಹಾಜರಿದ್ದರು.