ಆಸ್ಪತ್ರೆಗಳಿಗೆ ಮೂಲಭೂತ ಸೌಲಭ್ಯಕ್ಕಾಗಿ ಕಾರ್ಮಿಕರ ಆಗ್ರಹ

ಆಸ್ಪತ್ರೆಗಳಿಗೆ ಮೂಲಭೂತ ಸೌಲಭ್ಯಕ್ಕಾಗಿ ಕಾರ್ಮಿಕರ ಆಗ್ರಹ

ದಾವಣಗೆರೆ, ಜು.16- ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲೆಯ ನಗರ ಹಾಗೂ ಗ್ರಾಮೀಣ  ಪ್ರದೇಶಗಳಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಸೇರಿದಂತೆ, ಅನೇಕ ಬೇಡಿಕೆಗಳ ಮನವಿಯನ್ನು ನಗರದ ನೆರಳು ಬೀಡಿ ಕಾರ್ಮಿಕರ ಯೂನಿಯನ್ ರಾಜ್ಯ ಆರೋಗ್ಯ ಸಚಿವರಿಗೆ ಸಲ್ಲಿಸಿದೆ. 

ಕಳೆದ ವಾರ ನಗರಕ್ಕೆ ಆಗಮಿಸಿದ್ದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಮತ್ತು ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸಂಘದ ಸದಸ್ಯರು ಮನವಿ ಸಲ್ಲಿಸಿ, ಮೂಲಭೂತ ಸೌಲಭ್ಯದ ಜೊತೆಗೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ, ಔಷಧಿ ಅಲಭ್ಯತೆ, ಟೆಸ್ಟ್‌ಗಳನ್ನು ಹೊರಗಡೆ ಬರೆದುಕೊಡುವುದು ಮಾಡಲಾಗುತ್ತಿದೆ. ಆರೋಗ್ಯ ಕೇಂದ್ರಗಳಲ್ಲಿಯೂ ಅಗತ್ಯ ಸೌಲಭ್ಯಗಳಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಎಲ್ಲದಕ್ಕೂ ಹಣ ವಸೂಲಿ ಮಾಡಲಾಗುತ್ತದೆ ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಅಲ್ಲದೇ ಕರ್ನಾಟಕದಲ್ಲಿ ಸರ್ಕಾರ ಆರೋಗ್ಯ ನೀತಿಯನ್ನು ಜಾರಿಗೊಳಿಸ ಬೇಕು. ಎಲ್ಲ ಔಷಧಿಗಳು ಉಚಿತವಾಗಿ ದೊರೆಯಬೇಕು. ಆರೋಗ್ಯ ಇಲಾಖೆಗೆ ಬಜೆಟ್‌ನಲ್ಲಿ ಶೇ.0.8 ಬದಲು 2.5 ಹಣವನ್ನು ತೆಗೆದಿರಿಸಬೇಕು. ಆರೋಗ್ಯ ಕೇಂದ್ರಗಳಿಗೆ ಅಗತ್ಯ ವೈದ್ಯರನ್ನು ನೇಮಿಸಬೇಕು. ಕೆಲವು ಕಟ್ಟಡಗಳು ಶಿಥಿಲಗೊಂಡಿವೆ, ಅವನ್ನು ಸರಿಪಡಿಸಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರನ್ನು ಆಗ್ರಹಿಸಿದರು.

error: Content is protected !!