ಅನುದಾನ ಕಡಿತ, ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗುವ ಅಪಾಯ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ದಾವಣಗೆರೆ, ಜು. 11 – ಜನಸಂಖ್ಯಾ ಸ್ಫೋಟ ದೇಶದ ಬೆಳವಣಿಗೆಗೆ ಮಾರಕವಾಗಿದೆ. ಜನಸಂ ಖ್ಯಾ ಸ್ಫೋಟ ತಡೆಯಲು ಅಪಾರವಾಗಿ ಶ್ರಮಿಸಿದ ರಾಜ್ಯಗಳಿಗೆ ಪ್ರೋತ್ಸಾಹ ಸಿಗುವ ಬದಲು ಎರಡು ರೀತಿಯ ಹೊಡೆತಗಳು ಎದುರಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಷಾದಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಸಂಘಗಳ ವತಿಯಿಂದ ನಗರದ ಬಿ.ಐ.ಇ.ಟಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಸಂಖ್ಯೆ ಬೆಳವಣಿಗೆಯನ್ನು ಸೂಚಿಸುವ ಒಟ್ಟು ಫಲವತ್ತತೆ ದರ (ಟಿ.ಎಫ್.ಆರ್.) ರಾಷ್ಟ್ರ ಮಟ್ಟದಲ್ಲಿ ಶೇ.2.2 ಇದೆ. ಆದರೆ, ರಾಜ್ಯದಲ್ಲಿ ಶೇ.1.6 ಆಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಜನಸಂಖ್ಯೆ ನಿಯಂತ್ರಣದಲ್ಲಿ ಅತಿ ಹೆಚ್ಚಿನ ಕೊಡುಗೆ ನೀಡಿವೆ ಎಂದವರು ಹೇಳಿದರು.
ಆದರೆ, ಈ ಸಾಧನೆಯ ಕಾರಣದಿಂದಾಗಿಯೇ ರಾಜ್ಯಕ್ಕೆ ಅನುದಾನ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ಹೆಚ್ಚಿನ ಜನಸಂಖ್ಯೆಯುಳ್ಳ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. ಕರ್ನಾಟಕದಲ್ಲಿ ಜನಸಂಖ್ಯೆ ಕಡಿಮೆಯಾಗಿರುವ ಕಾರಣ, ಅನುದಾನಕ್ಕಾಗಿ ಕೇಂದ್ರದ ಜೊತೆ ಘರ್ಷಣೆ ನಡೆಸುವ ಪರಿಸ್ಥಿತಿ ಬಂದಿದೆ. ಒಳ್ಳೆ ಕೆಲಸ ಮಾಡಿದವರಿಗೆ ಶಿಕ್ಷೆ ನೀಡಿದರೆ ಹೇಗೆ? ಎಂದು ಸಚಿವರು ಪ್ರಶ್ನಿಸಿದರು.
ಇದರ ಜೊತೆಗೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ನಡೆದರೆ ಲೋಕಸಭೆಯಲ್ಲಿ ರಾಜ್ಯ ಹೊಂದಿರುವ ಪ್ರಾತಿನಿಧ್ಯದ ಪ್ರಮಾಣ ಕಡಿ ಮೆಯಾಗುವ ಅಪಾಯವೂ ಇದೆ. ಪುನರ್ವಿಂ ಗಡಣೆಯಿಂದ ಉತ್ತರದ ರಾಜ್ಯಗಳಿಗೆ ರಾಜಕೀಯ ಶಕ್ತಿ ಹೆಚ್ಚಾದರೆ, ದಕ್ಷಿಣದ ರಾಜ್ಯಗಳಿಗೆ ಕಡಿಮೆಯಾ ಗಲಿದೆ. ಈ ಸಮಸ್ಯೆ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸುವ ಅಗತ್ಯವಿದೆ ಎಂದವರು ಹೇಳಿದರು.
ಇಷ್ಟಾದರೂ, ಜನಸಂಖ್ಯೆ ನಿಯಂತ್ರಣ ತುರ್ತು ಅಗತ್ಯವಾಗಿದೆ. ಈಗಿನ ಪರಿಸ್ಥಿತಿಯಲ್ಲಿ 2050ರವರೆಗೂ ದೇಶದ ಜನಸಂಖ್ಯೆ ನಿರಂತರವಾಗಿ ಏರಿಕೆಯಾಗಲಿದೆ. ನಂತರವೇ ಇಳಿಮುಖವಾಗಲಿದೆ. ಅಪಾರ ಜನಸಂಖ್ಯೆ ಯಿಂದಾಗಿ ಪರಿಸರದ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣ ಮಹತ್ವದ್ದಾಗಿದೆ ಎಂದು ಸಚಿವರು ಹೇಳಿದರು.