ಪತ್ರಿಕಾ ಗೋಷ್ಠಿಯಲ್ಲಿ ಕಿಡಿಕಾರಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್
ದಾವಣಗೆರೆ, ಜು. 11- ರಾಜ್ಯದ ಬೇರೆ ಬೇರೆ ಮಹಾನಗರ ಪಾಲಿಕೆಗಳ ಕರ ವಸೂಲಾತಿ ನಮೂನೆಯಲ್ಲಿ ಇಲ್ಲದ ಒಳಚರಂಡಿ ಹಾಗೂ ಘನತ್ಯಾಜ್ಯ ವಿಲೇವಾರಿ ಶುಲ್ಕವನ್ನು ನಗರದ ಆಸ್ತಿದಾರರಿಗೆ ಮನಬಂದಂತೆ ನಿಗದಿಪಡಿಸಿ, ತೆರಿಗೆ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ ಆರೋಪಿಸಿದರು.
ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ವಾಣಿಜ್ಯ ಮಳಿಗೆಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದಿದ್ದರೂ ಸಹ ಒಳಚರಂಡಿ ಶುಲ್ಕದ ಹೆಸರಿನಲ್ಲಿ ಪ್ರತಿ ಮಳಿಗೆಗೆ 1200 ರೂ. ನಿಗದಿ ಮಾಡಲಾಗಿದೆ. ಅದೇ ರೀತಿ ಮಹಾನಗರ ಪಾಲಿಕೆ ಆಡಳಿತ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಹೊರಗುತ್ತಿಗೆ ನೀಡಿದ್ದರೂ, ವಾಣಿಜ್ಯ ಮಳಿಗೆ ಮಾಲೀಕರಿಂದ ಘನ ತ್ಯಾಜ್ಯ ವಿಲೇವಾರಿ ನೆಪದಲ್ಲಿ 1200 ರೂ. ವಸೂಲಿ ಮಾಡಲಾಗುತ್ತಿದೆ. ಒಟ್ಟು ಒಂದು ಮಳಿಗೆಯಿಂದ ಒಳಚರಂಡಿ ಮತ್ತು ಘನ ತ್ಯಾಜ್ಯ ವಿಲೇವಾರಿ ಶುಲ್ಕ ಸೇರಿ 2400 ರೂ. ಆಸ್ತಿ ತೆರಿಗೆ ಜೊತೆಗೆ ಹೆಚ್ಚುವರಿಯಾಗಿ ಕರ ನಿಗದಿಪಡಿಸಿ ವಸೂಲಾತಿ ಮಾಡಲಾಗಿದೆ ಎಂದು ದೂರಿದರು.
ಸ್ವಯಂಘೋಷಿತ ಆಸ್ತಿ ತೆರಿಗೆ ನಿಯಮಗಳನ್ನು ಉಲ್ಲಂಘಿಸಿ, ನಾಗರಿಕರಿಗೆ ಮಹಾನಗರ ಪಾಲಿಕೆ ಆಡಳಿತ ಅಸಂಬದ್ದ, ಅಸಮರ್ಪಕ ಹಾಗೂ ಹಗಲು ದರೋಡೆ ತೆರಿಗೆಯನ್ನು ವಿಧಿಸಿದೆ ಎಂದು ಆರೋಪಿಸಿದರು.
ನಾಗರಿಕರಿಗೆ ಸೇರಿದ ಖಾಲಿ ನಿವೇಶನ, ವಸತಿ ನಿವೇಶನ, ವಾಣಿಜ್ಯ ಮಳಿಗೆಗಳ ಕರ ವಸೂಲಾತಿ ವಿಷಯದಲ್ಲಿ ಪಾಲಿಕೆ ಆಡಳಿತ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಬೇರೆ ಬೇರೆ ನಗರಪಾಲಿಕೆಗಳಿಗೆ ಹೋಲಿಕೆ ಮಾಡಿ ನೋಡಿದರೆ ಶೇ. 50 ರಿಂದ 80 ರಷ್ಟು ಹೆಚ್ಚು ಕರ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಕೂಡಲೇ ದಾವಣಗೆರೆ ಮಹಾನಗರ ಪಾಲಿಕೆ ಆಡಳಿತ ವಾರ್ಷಿಕ 2024-25 ರಲ್ಲಿ ಮಾಡಿರುವ ಮುಂಗಡ ಕರ ವಸೂಲಾತಿಯನ್ನು ನಿಲ್ಲಿಸಿ, ಹೆಚ್ಚುವರಿಯಾಗಿ ಪಡೆದ ಹಣವನ್ನು ಆಸ್ತಿದಾರರಿಗೆ ಕಟ್ಟಡದ ಹೆಚ್ಚುವರಿ ಹಣವನ್ನು ಹಿಂದಿರುಗಿಸಬೇಕು ಅಥವಾ ಮುಂಬರುವ ವಾರ್ಷಿಕ 2025-26 ನೇ ಸಾಲಿನ ವಾರ್ಷಿಕ ಆಸ್ತಿ ತೆರಿಗೆಯಲ್ಲಿ ಇದನ್ನು ಸರಿದೂಗಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಎಸ್.ಟಿ. ವೀರೇಶ್, ಬಿ.ಜಿ. ಅಜಯ್ ಕುಮಾರ್, ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಮಾಜಿ ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿ ರಾವ್, ಉಪ ಮೇಯರ್ ಯಶೋಧ ಹೆಗ್ಗಪ್ಪ, ಸದಸ್ಯರುಗಳಾದ ಆರ್. ಶಿವಾನಂದ್, ಕೆ.ಎಂ. ವೀರೇಶ್, ಶಿವಪ್ರಕಾಶ್, ವಕ್ತಾರ ಬಿ.ಎಂ. ಸತೀಶ್ ಕೊಳೇನಹಳ್ಳಿ, ಮುಖಂಡರಾದ ಸುರೇಶ್ ಗಂಡಗಾಳೆ, ಜಯಪ್ರಕಾಶ್ ಮತ್ತಿತರರಿದ್ದರು.