ಜಗಳೂರು, ಜು. 10 – 7ನೇ ವೇತನ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಸಮಿತಿ ವತಿಯಿಂದ ಶಾಸಕ. ಬಿ.ದೇವೇಂದ್ರಪ್ಪ ಹಾಗೂ ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ ಅವರಿಗೆ ಲಿಖಿತ ಮನವಿ ಸಲ್ಲಿಸಲಾಯಿತು.
ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ಸಿ.ಬಿ. ನಾಗರಾಜ್ ಮಾತನಾಡಿ, ರಾಜ್ಯದ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸರ್ಕಾರ ಆದೇಶ ಹೊರಡಿಸಬೇಕು. ವರದಿ ಅನುಷ್ಠಾನ ಗೊಳಿಸಲು ತೆಗೆದುಕೊಂಡ ಅವಧಿ ಮೀರಿದ್ದು ವಿಳಂಬ ವಾಗಿದೆ. ಹಾಗೂ ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಬೇಕು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್ಎಸ್) ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಬಿ. ದೇವೇಂದ್ರಪ್ಪ ಮನವಿ ಸ್ವೀಕರಿಸಿ ಮಾತನಾಡಿ, ನಾನು ಒಬ್ಬ ಪಿಂಚಣಿ ಫಲಾನುಭವಿ ಯಾಗಿದ್ದು, ರಾಜ್ಯದಲ್ಲಿ ನಮ್ಮದೇ ಪಕ್ಷ ಆಡಳಿತ ದಲ್ಲಿದ್ದು ಅಂತೆಯೇ ನನ್ನ ಆಡಳಿತಾವಧಿಯಲ್ಲಿ 7ನೇ ವೇತನ ಜಾರಿಗೊಂಡರೆ ನಿಜಕ್ಕೂ ನನಗೂ ಲಾಭ ಮತ್ತು ಸಂತಸ ತರುತ್ತದೆ. ಅಧಿವೇಶನದಲ್ಲಿ ನಾನು ನಿಮ್ಮ ಬೇಡಿಕೆಯ ಧ್ವನಿಯಾಗುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ ಮಾತನಾಡಿ, 7ನೇ ವೇತನ ಹಾಗೂ ಓಪಿಎಸ್, ಆರೋಗ್ಯ ಸಂಜೀವಿನಿ ಸೌಲಭ್ಯ ಅವಶ್ಯಕತೆಯಿದೆ. ಸರ್ಕಾರಕ್ಕೆ ಕೂಡಲೇ ತಮ್ಮ ಮನವಿಯನ್ನು ರವಾನಿಸಲಾಗುವುದು’ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್. ಚಂದ್ರಪ್ಪ, ರಾಜ್ಯ ಪರಿಷತ್ತು ಸದಸ್ಯ ಬಣಕಾರ್, ಡಿ.ಎಸ್. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಲ್. ತಿಪ್ಪೇಸ್ವಾಮಿ, ಖಜಾಂಚಿ ಮಾರಪ್ಪ, ನಿರ್ದೇಶಕ ವೀರೇಶ್, ತಿರುಮಲೇಶ್, ಬಸವರಾಜ್, ಬಿ.ಮಹೇಶ್ವರಪ್ಪ, ಸತೀಶ್, ಹನುಮಂತೇಶ್, ಕೃಷ್ಣಪ್ಪ ಮುಂತಾದವರು ಇದ್ದರು.