ತಾಪಮಾನದಿಂದ ಚಂಡಮಾರುತದ ತೀವ್ರತೆ ಏರಿಕೆ, ಸಂಖ್ಯೆಯಲ್ಲ

ತಾಪಮಾನದಿಂದ ಚಂಡಮಾರುತದ ತೀವ್ರತೆ ಏರಿಕೆ, ಸಂಖ್ಯೆಯಲ್ಲ

ಹವಾಮಾನ ಬದಲಾವಣೆ ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳ ನಿಲುವು

ಲಂಡನ್, ಜು. 10 – ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಂಡಮಾರುತಗಳ ಸಂಖ್ಯೆ ಹೆಚ್ಚಾಗದಿದ್ದರೂ ಅವುಗಳ ತೀವ್ರತೆ ಹೆಚ್ಚಾಗಲಿದೆ. ಇದರಿಂದ ದ್ವೀಪ ದೇಶಗಳು ಹಾಗೂ ಬಡ ದೇಶಗಳ ಮೇಲೆ ಗಂಭೀರ ಪರಿಣಾಮವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಗ್ರೆನ್‌ಡೈನ್ ದ್ವೀಪಗಳಿಗೆ ಅಪ್ಪಳಿಸಿದ ಬೆರಿಲ್ ಚಂಡಮಾರುತದ ಅಧ್ಯಯನ ಮಾಡಿದ ವಿಜ್ಞಾನಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಂಟೆಗೆ 150 ಮೈಲಿ ವೇಗದ ಗಾಳಿಯೊಂದಿಗೆ ಈ ಚಂಡಮಾರುತ ಆರ್ಭಟಿಸಿತ್ತು.

ಅಟ್ಲಾಂಟಿಕ್ ವಲಯದಲ್ಲಿ ಚಂಡಮಾರುತಗಳು ಅಪರೂಪವೇನಲ್ಲ. ಚಂಡಮಾರುತ ಆರಂಭವಾಗುವ ಮೊದಲೇ ಮುನ್ಸೂಚನೆಗಳು ಸಿಗುತ್ತವೆ. ಆದರೆ ಬೆರಿಲ್ ಚಂಡಮಾರುತ ಕೇವಲ 24 ಗಂಟೆಗಳಲ್ಲಿ ತನ್ನ ಸರಾಸರಿ ವೇಗವನ್ನು 70 ಮೈಲಿಗಳಿಂದ 130 ಮೈಲಿಗಳಿಗೆ ಹೆಚ್ಚಿಸಿಕೊಂಡಿದ್ದು ವಿಜ್ಞಾನಿಗಳಲ್ಲಿ ಅಚ್ಚರಿ ತಂದಿದೆ.

ಈ ರೀತಿಯ ಚಂಡಮಾರುತಗಳು ಅಟ್ಲಾಂಟಿಕ್ ವಲಯದಲ್ಲಿ ಆರಂಭದ ದಿನಗಳಲ್ಲಿ ಕಂಡುಬರುವುದು ಅಪರೂಪ. ಸಮುದ್ರದ ಗಾಳಿ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾಗಿರುವ ಕಾರಣ ಬೆರಿಲ್ ಚಂಡಮಾರುತ ವೇಗವಾಗಿ ತೀವ್ರತೆ ಪಡೆದುಕೊಂಡಿದೆ ಎಂದು ನ್ಯೂಯಾರ್ಕ್ ಸ್ಟೇಟ್ ಯೂನಿವರ್ಸಿಟಿಯ ಪರಿಸರ ವಿಜ್ಞಾನಿ ಬ್ರಿಯಾನ್ ಟ್ಯಾಂಕ್ ಹೇಳಿದ್ದಾರೆ.

ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಚಂಡಮಾರುತಗಳು ತೀರಾ ಅಚ್ಚರಿ ತರುವಂತದ್ದೇನು ಅಲ್ಲ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದರಲ್ಲೂ ಮಧ್ಯ ಅಟ್ಲಾಂಟಿಕ್ ಪ್ರದೇಶದಲ್ಲಿ ಈ ರೀತಿಯ ಚಂಡಮಾರುತಗಳು ಕಂಡುಬರುವುದು ಅಪರೂಪವೇನೂ ಅಲ್ಲ.

ಆದರೆ ಸಾಮಾನ್ಯವಾಗಿ ಬೇಸಿಗೆಯ ಮಧ್ಯ ಭಾಗದಲ್ಲಿ ಸಮುದ್ರದ ನೀರು ಹೆಚ್ಚು ಬಿಸಿಯಾಗಿರುತ್ತದೆ. ಅಟ್ಲಾಂಟಿಕ್ ವಲಯದಲ್ಲಿ ಬೇಸಿಗೆಯ ಆರಂಭದಲ್ಲೇ ಸಮುದ್ರದ ನೀರು ಇಷ್ಟೊಂದು ಬಿಸಿಯಾಗಿರುವುದು ಗಮನಾರ್ಹ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆರಂಭದಲ್ಲೇ ಚಂಡಮಾರುತ ಈ ಪರಿ ಇದ್ದರೆ ಮುಂಬರುವ ದಿನಗಳಲ್ಲಿ ಏನಾಗಬಹುದು ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಸಮುದ್ರದ ನೀರು 26 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಲ್ಲಿ ಅದು ಚಂಡಮಾರುತಕ್ಕೆ ಸಹಾಯಕವಾಗುತ್ತದೆ. ಬಿಸಿ ವಾತಾವರಣ ಹಾಗೂ ಗಾಳಿಯಲ್ಲಿ ತೇವಾಂಶ ಇರುವುದು ಚಂಡಮಾರುತಕ್ಕೆ ಅಗತ್ಯ. ಇದರ ಜೊತೆಗೆ ಗಾಳಿಯ ಚಲನವೂ ಚಂಡಮಾರುತಕ್ಕೆ ನೆರವಾಗುತ್ತದೆ.

ಜಾಗತಿಕ ತಾಪಮಾನ ಹೆಚ್ಚಾದಂತೆ ಚಂಡಮಾರುತಗಳ ಸಂಖ್ಯೆಯೂ ಹೆಚ್ಚಾಗಬಹುದು ಎಂದು ನೀವು ಯೋಚಿಸಬಹುದು. ಆದರೆ ಇದುವರೆಗೂ ನಡೆಸಲಾದ ಅಧ್ಯಯನಗಳಲ್ಲಿ ಚಂಡಮಾರುತಗಳ ಸಂಖ್ಯೆ ಹೆಚ್ಚಾಗುವುದು ಕಂಡುಬಂದಿಲ್ಲ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿ ಬೆನ್ ಕ್ಲಾರ್ಕೆ ಹಾಗೂ ಇಂಪೀರಿಯಲ್ ಕಾಲೇಜ್ ಲಂಡನ್‌ನ ಫ್ರೀಡೆರೈಕ್ ಓಟೋ ತಿಳಿಸಿದ್ದಾರೆ.

ತಾಪಮಾನ ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಬಿಸಿ, ತೇವಾಂಶ ಇರುವ ಗಾಳಿ ಹಾಗೂ ಸಮುದ್ರದಲ್ಲಿ ಹೆಚ್ಚಿನ ತಾಪಮಾನ ಸಾಮಾನ್ಯವಾಗಿ ಕಂಡು ಬರುತ್ತಿದೆ. ಆದರೂ ಚಂಡಮಾರುತಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಯಾವುದೇ ಸಾಕ್ಷಿಗಳು ದೊರೆತಿಲ್ಲ. ಮುಂದಿನ ದಿನಗಳಲ್ಲಿ ತಾಪಮಾನ ಹೆಚ್ಚಾದರೂ ಚಂಡಮಾರುತಗಳ ಸಂಖ್ಯೆ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಇಲ್ಲ ಎಂದು ಈ ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಚಂಡಮಾರುತಗಳು ಬೆರಿಲ್ ರೀತಿಯಲ್ಲಿ ಅತಿ ಹೆಚ್ಚಿನ ತೀವ್ರತೆ ಹೊಂದಿರುತ್ತವೆ. ತೀವ್ರ ಚಂಡಮಾರುತಕ್ಕೆ ಅಗತ್ಯವಾದ ಅಂಶಗಳು ಉತ್ತರ ಹಾಗೂ ದಕ್ಷಿಣ ಗೋಳಗಳಲ್ಲಿ ಕಂಡು ಬರುತ್ತಿವೆ. ಸಮುದ್ರದ ತಾಪಮಾನ ಹೆಚ್ಚಾಗುತ್ತಾ ಹೋದರೆ ಸಾಮಾನ್ಯ ದಿನಗಳಿಗೆ ಹೊರತಾಗಿಯೂ ಚಂಡಮಾರುತ ಸೃಷ್ಟಿಯಾಗಬಹುದು ಎಂದವರು ಹೇಳಿದ್ದಾರೆ.

ಕೆಲವೊಮ್ಮೆ ಚಂಡಮಾರುತಗಳು ಸಮುದ್ರ ತೀರದ ಬಳಿ ಬಂದಾಗ ಸಂಪೂರ್ಣ ಸ್ಥಗಿತಗೊಳ್ಳುತ್ತಿವೆ. ಇದರಿಂದಾಗಿ ಮಳೆಯ ಪ್ರಮಾಣ ಹೆಚ್ಚಾಗುತ್ತದೆ ಹಾಗೂ ಪ್ರವಾಹ ತೀವ್ರಗೊಳ್ಳುತ್ತಿದೆ. ಹೀಗಾಗಿಯೇ ಲೂಸಿಯಾನಗೆ 2017ರಲ್ಲಿ ಅಪ್ಪಳಿಸಿದ ಚಂಡಮಾರುತ ಅತ್ಯಂತ ವಿನಾಶಕಾರಿಯಾಗಿತ್ತು ಎಂದು ಕ್ಲಾರ್ಕೆ ಹಾಗೂ ಓಟೋ ಹೇಳಿದ್ದಾರೆ.

ಇದರ ಜೊತೆಗೆ ಕೆಲವೊಮ್ಮೆ ಚಂಡಮಾರುತಗಳು ಒಂದರ ಹಿಂದೆ ಮತ್ತೊಂದರಂತೆ ಅಪ್ಪಳಿಸುವ ಕಾರಣ ದಿಂದ ಸಂಕಷ್ಟ ಹೆಚ್ಚಾಗುತ್ತಿದೆ.  ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಜನ ವಾಸಿಸುವುದು ಕಠಿಣವಾಗುತ್ತಿದೆ ಎಂದು ಎಡಿನ್‌ಬರ್ಗ್ ನೇಪಿಯರ್ ವಿಶ್ವವಿದ್ಯಾಲಯದ ಸಂಶೋಧಕಿ ಅನಿತಾ ಕಾರ್ತಿಕ್ ಹೇಳಿದ್ದಾರೆ.

ಇದರ ಜೊತೆಗೆ ಚಂಡಮಾರುತಗಳು ಸಣ್ಣ ದೇಶಗಳಿಗೆ ಅಪ್ಪಳಿಸಿದಾಗ ಅವುಗಳ ಆರ್ಥಿಕ ಶಕ್ತಿಯೇ ನಾಶವಾಗುತ್ತದೆ. ಶ್ರೀಮಂತ ಹಾಗೂ ಬಡ ದೇಶಗಳಿಗೆ ಚಂಡಮಾರುತದಿಂದ ಆಗುವ ಪರಿಣಾಮ ಬೇರೆ ಬೇರೆ ರೀತಿ ಆಗಿದೆ. ಬಡ ದೇಶಗಳು ಚಂಡಮಾರುತದಿಂದ ಆಗುವ ಹಾನಿಯನ್ನು ಎದುರಿಸುವಷ್ಟು ಶಕ್ತಿ ಹೊಂದಿರುವುದಿಲ್ಲ.

ದ್ವೀಪ ದೇಶಗಳು ತಾಪಮಾನ ಹೆಚ್ಚುತ್ತಿರುವ ಈ ಕಾಲದಲ್ಲಿ ಹೊಸಘಟ್ಟಕ್ಕೆ ಕಾಲಿಡುತ್ತಿವೆ. ಚಂಡಮಾರುತ ಗಳ ತೀವ್ರತೆಯು ಪರಿಸರ ಹೊಂದಾಣಿಕೆಯ ಅಗತ್ಯವನ್ನು ಇನ್ನಷ್ಟು ಒತ್ತಿ ಹೇಳುತ್ತಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

error: Content is protected !!