ಶ್ರಾವಣ ಮಾಸದ ನಂತರ ರಾಂಪುರ ಮಠಕ್ಕೆ ನೂತನ ವಟು ಆಯ್ಕೆ : ಕಾಶಿ ಜಗದ್ಗುರುಗಳು

ಶ್ರಾವಣ ಮಾಸದ ನಂತರ ರಾಂಪುರ ಮಠಕ್ಕೆ ನೂತನ ವಟು ಆಯ್ಕೆ : ಕಾಶಿ ಜಗದ್ಗುರುಗಳು
  • ಅವಿತಿಟ್ಟ ವಟುವಿನ ಹೆಸರಿರುವ ಚೀಟಿ  ತರಲಿಲ್ಲ ಉತ್ಸವ ದೇವರ ಪಲ್ಲಕ್ಕಿ
  • ರಾಂಪುರ ಹಾಲಸ್ವಾಮಿ ಮಠಕ್ಕೆ ನೂತನ ವಟುವಿನ ಆಯ್ಕೆಗೆ ಆಷಾಢ ಮಾಸ ಅಡ್ಡಿಯಾಯಿತೇ ? 
  • ಕಾಶಿ ಶ್ರೀಗಳಿಂದ ಬರಲಿಲ್ಲ ಉತ್ತರ ! ನೆರೆದ ಭಕ್ತರು ತತ್ತರ 

ಹೊನ್ನಾಳಿ, ಜು. 10 – ಪವಾಡಕ್ಕೆ ಹೆಸರಾದ ಹೊನ್ನಾಳಿ ತಾಲ್ಲೂಕು ರಾಂಪುರ ಗ್ರಾಮದ ತುಂಗಭದ್ರಾ ನದಿ ದಡದಲ್ಲಿರುವ ಕಾಶಿ ಪೀಠದ ಶಾಖಾ ಮಠಗಳಲ್ಲಿ ಒಂದಾದ ಪುತ್ರವರ್ಗ ಮಠ, ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಬೃಹನ್ಮಠದ ನೂತನ ವಟುವಿನ ಆಯ್ಕೆಯನ್ನು ಬುಧವಾರ ಏರ್ಪಡಿಸಲಾಗಿತ್ತು.

ಗ್ರಾಮದ ಕರ್ತೃ ಗದ್ದುಗೆಯ ಆವರಣದಲ್ಲಿ ಶ್ರೀ ಮಠದ ಪಾದುಕೆಯ ಪಲ್ಲಕ್ಕಿಯ ಉತ್ಸವ ಮೂರ್ತಿಯ ಮೂಲಕ ಶ್ರೀ ಕಾಶಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ, ನಾಡಿನ ಹಲವಾರು ಸ್ವಾಮೀಜಿಗಳ ಉಪಸ್ಥಿತಿಯಲ್ಲಿ, ಸರ್ವಭಕ್ತರ ಸಮ್ಮುಖದಲ್ಲಿ ದಿನವಿಡೀ ನಿರೀಕ್ಷಿಸಿದರೂ ಸಹ ಉತ್ಸವ ಪಲ್ಲಕ್ಕಿ, ಗ್ರಾಮದ 8 ಸ್ಥಳದಲ್ಲಿ ಅವಿತಿಟ್ಟ ವಟುವಿನ ಹೆಸರು ಬರೆದ ಚೀಟಿ ತರದೇ ಹೋದ ಕಾರಣಕ್ಕೆ ಆಯ್ಕೆಯನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ನೆರೆದ ಧರ್ಮಸಭೆಯಲ್ಲಿ ಸರ್ವಭಕ್ತರ ಅಪೇಕ್ಷೆಯ ಮೇರೆಗೆ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನಿರ್ಣಯ ಕೈಗೊಂಡರು.

ಬೆಳಿಗ್ಗೆ ಗ್ರಾಮದ 8 ಸ್ಥಳಗಳಲ್ಲಿ ಅಪೇಕ್ಷೆ ಬಯಸಿದ ಎಂಟು ವಟುಗಳ ಹೆಸರು ಬರೆದ ಚೀಟಿಯನ್ನು 8 ಕವರ್‌ಗಳಲ್ಲಿ ಹಾಕಿ ಇರಿಸಲಾ ಗಿತ್ತು, ನಂತರ ಹಾಲಸ್ವಾಮಿ ಕರ್ತೃ ಗದ್ದುಗೆಯ ಕಲ್ಮಠದ ಉತ್ಸವ ಪಲ್ಲಕ್ಕಿ ಹೊರಡಿಸಿ, ಎಂಟು ಚೀಟಿಯಲ್ಲಿ ಒಂದು ಚೀಟಿ ತರುವಂತೆ, ಆ ಚೀಟಿ ಯಲ್ಲಿ ಇರುವ ಹೆಸರಿನವರನ್ನು ನೂತನ ವಟು ವಾಗಿ ಆಯ್ಕೆ ಮಾಡಲು ನಿರ್ಣಯಿಸಲಾಗಿತ್ತು.

ಮೂರು ಬಾರಿ ಉತ್ಸವ ಪಲ್ಲಕ್ಕಿಯನ್ನು ಗ್ರಾಮದ ಒಳಗಡೆ ತೆಗೆದುಕೊಂಡು ಹೋದರೂ ಸಹ ಚೀಟಿ ತರಲು ಪಲ್ಲಕ್ಕಿ ಇಚ್ಚಿಸದ ಕಾರಣ, ನೆರೆದಿದ್ದ ಭಕ್ತರು ಆಷಾಢ ಮಾಸದ ಕಾರಣಕ್ಕೆ ನೂತನ ವಟುವಿನ ಆಯ್ಕೆ ಪಲ್ಲಕ್ಕಿ ಒಪ್ಪುತ್ತಿಲ್ಲ ಎಂದು ಭಾವಿಸಿದರಾದರೂ? ಇದೇ ಪ್ರಶ್ನೆಯನ್ನು ಮಾಧ್ಯಮ ಪ್ರತಿನಿಧಿಗಳು ಕಾಶಿ ಶ್ರೀಗಳಿಗೆ ಕೇಳಿದಾಗ ಇದಕ್ಕೆ ಏನನ್ನೂ ಉತ್ತರಿಸದ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಗದ್ದುಗೆ ಮಠದ ಕಡೆ ಕೈ ತೋರಿದರು.

ಇದಕ್ಕೂ ಮೊದಲು ಧರ್ಮಸಭೆ ಉದ್ದೇಶಿಸಿ ಮಾತನಾಡಿದ ಕಾಶಿ ಶ್ರೀಗಳು, ಆಷಾಢ ಮಾಸ ಮತ್ತು ಶ್ರಾವಣ ಮಾಸ ಕಳೆದ ನಂತರದಲ್ಲಿ ಕಲ್ಮಠದ ಉತ್ಸವ ಪಲ್ಲಕ್ಕಿ ಹೇಳಿದ ರೀತಿಯಲ್ಲಿಯೇ,  ಆಯ್ಕೆ ಪ್ರಕ್ರಿಯೆ ನಡೆಸಿ ಶ್ರೀಮಠಕ್ಕೆ ನೂತನ ವಟು ಆಯ್ಕೆ ಮಾಡೋಣ ಎಂದು ಹೇಳಿ ಧರ್ಮಸಭೆ ಅಂತ್ಯಗೊಳಿಸಿದರು.

ಧರ್ಮಸಭೆಯಲ್ಲಿ ಹೊನ್ನಾಳಿ ಹಿರೇಕಲ್ಮಠದ ಶ್ರೀ ಡಾ. ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ದುಗ್ಗಾವತಿ ಮಠದ ಶ್ರೀ ವೀರಭದ್ರ  ಸ್ವಾಮೀಜಿ, ಚನ್ನಗಿರಿಯ ಹಿರೇಮಠದ ಶ್ರೀ ಕೇದಾರ ಶಿವಶಾಂತಲಿಂಗ ಸ್ವಾಮೀಜಿ, ಬುಕ್ಕಸಾಗರ ಕರಿಸಿದ್ದೇಶ್ವರ ಮಠದ ಶ್ರೀ ಬಾಲ ಶಿವಯೋಗಿ ಕರಿಸಿದ್ದೇಶ್ವರ  ಸ್ವಾಮೀಜಿ, ಮಣಕೂರು ಶ್ರೀ ಹಾಲಸ್ವಾಮಿ ಶಾಖಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಗೋವಿನಕೋವಿ ಹಾಲಸ್ವಾಮೀಜಿ ಮಠದ ಸದ್ಗುರು ಶ್ರೀ ಶಿವಯೋಗಿ ಮಹಾಲಿಂಗ  ಹಾಲಸ್ವಾಮೀಜಿ, ಹಾಲಸ್ವಾಮೀಜಿ ಶಾಖಾಮಠಗಳ ನಾಗತಿಹಳ್ಳಿ, ಬಸಾಪುರ ಶ್ರೀ ಗಿರಿರಾಜ ಹಾಲಸ್ವಾಮೀಜಿ, ಶ್ರೀ ಅಡವಿಹಳ್ಳಿ ಹಾಲಸ್ವಾಮೀಜಿ, ಶ್ರೀ ಗಂಗಾಧರ ಹಾಲಸ್ವಾಮೀಜಿ, ಹನುಮನಹಳ್ಳಿ ಮಠದ ಶ್ರೀ ಓಂಕಾರ ಹಾಲಸ್ವಾಮೀಜಿ, ಹಿರೇಹಡಗಲಿ ಅಭಿನವ ಶ್ರೀ ಹಾಲಶ್ರೀ, ದಾವಣಗೆರೆಯ  ಯರಕುಂಟೆ ಮಠದ ಶ್ರೀ ಪರಮೇಶ್ವರಯ್ಯ ಸ್ವಾಮೀಜಿ, ನಂದಿಗಾವಿ ಹಾಲಸ್ವಾಮಿ, ಶಾಖಾ ಮಠದ ಹಾಲಸ್ವಾಮೀಜಿಗಳು ಉಪಸ್ಥಿತರಿದ್ದರು.

ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಕಾಡ ಅಧ್ಯಕ್ಷ ಗಿರೀಶ್ ಪಾಟೀಲ್, ಬೇಡ ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ಭೈರನಹಳ್ಳಿ ಪಂಚಾಕ್ಷರಯ್ಯ ಸೇರಿದಂತೆ, ಇತರ ಗಣ್ಯಾತಿಗಣ್ಯರು, ಹಲವು ಜಿಲ್ಲೆಗಳಿಂದ ಆಗಮಿಸಿ ಧರ್ಮಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!