ಸಿವಿಲ್ ಇಂಜಿನಿಯರ್‌ಗಳ ಮಾನ್ಯತೆಗೆ ಮಸೂದೆ

ಸಿವಿಲ್ ಇಂಜಿನಿಯರ್‌ಗಳ ಮಾನ್ಯತೆಗೆ ಮಸೂದೆ

ದಾವಣಗೆರೆ, ಜು.10- ಮನೆ ಮತ್ತು ಇತರೆ ಕಟ್ಟಡಗಳನ್ನು ತಮ್ಮ ಮನ ಬಂದಂತೆ ನೀಲಿ ನಕ್ಷೆ ತಯಾರಿಸಿ ಇರುವ ಕಾನೂನನ್ನು ಉಲ್ಲಂಘಿಸಿ ಹಿಂಬಾಗಿಲಿನಿಂದ ಪರವಾನಿಗೆ ಪಡೆದು ಇಂಜಿನಿಯರ್‌ಗಳಂತೆ ವರ್ತಿಸಿ, ಕಟ್ಟಡಗಳನ್ನು ಕಟ್ಟುತ್ತಿರುವ ಜನರಿಗೆ ಲೆಕ್ಕವಿಲ್ಲ. ಇಂತವರಿಂದ ನಿಜವಾದ ಸಿವಿಲ್ ಇಂಜಿನಿಯರ್‌ಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಇನ್ನು ಮುಂದೆ ಅಂತಹ ನಕಲಿ ಇಂಜಿನಿಯರ್‌ಗಳ ದುಸ್ಸಾಹಸಕ್ಕೆ ತೆರೆ ಬೀಳಲಿದೆ. ಕಾರಣ ನಿಜವಾದ ಸಿವಿಲ್ ಇಂಜಿನಿಯರ್‌ಗಳಿಗೆ ಮಾನ್ಯತೆ ದೊರೆಯಲಿದೆ. ಇತ್ತೀಚಿಗಷ್ಟೆ `ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ಮಸೂದೆ’ ಜಾರಿಯಾಗಿದೆ. ಇಂಜಿನಿಯರ್‌ಗಳು ಕಳೆದ ಮೂರು ದಶಕಗಳ ನಿರಂತರ ಹೋರಾಟಕ್ಕೆ ಜಯ ದೊರೆತಿದೆ.

ಈ ಹೋರಾಟದ ಮುಂಚೂಣಿಯಲ್ಲಿದ್ದ ಇಂಜಿನಿಯರ್‌ಗಳಾದ ಶ್ರೀಕಾಂತ್ ಚನ್ನಲ್, ಡಾ. ಮನಮೋಹನ್ ಆರ್.  ಕಲ್ಗಲ್, ಅಜಿತ್ ಕುಮಾರ್ ಎಸ್. ಮುಗ್ದಮ್, ಡಿ. ರಂಗನಾಥ್, ಎಚ್. ಆರ್. ಗಿರೀಶ್ ಹಾಗೂ ರಾಜೇಶ್ ಕಣ್ಣನ್ ಅವರನ್ನು ದಾವಣಗೆರೆ ವೃತ್ತಿನಿರತ ಸಿವಿಲ್ ಇಂಜಿನಿಯರ್‌ಗಳ ಒಕ್ಕೂಟ ಎಫ್.ಪೇಸ್ ವತಿಯಿಂದ ಸನ್ಮಾನಿಸಲಾಯಿತು. 

ಅಸ್ಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಆಫ್ ಇಂಡಿಯಾ, ಇನ್ ಸ್ಟ್ರಕ್ಟ್, ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್ ಇವುಗಳ ದಾವಣಗೆರೆ ಘಟಕಗಳ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ದಾವಣಗೆರೆ, ಹರಿಹರ, ಶಿವಮೊಗ್ಗ, ರಾಣೇಬೆನ್ನೂರು, ಚಿತ್ರದುರ್ಗ, ಬಳ್ಳಾರಿ ಮುಂತಾದ ಕಡೆಗಳಿಂದ ವೃತ್ತಿಪರ ಸಿವಿಲ್ ಇಂಜಿನಿಯರ್ಸ್ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿನಿಯರ್‌ ಗಳ ಮಸೂದೆ ಮೂಲಕ ಎಂಜಿನಿಯರ್‌ಗಳಿಗೆ ಮಾನ್ಯತೆ ದೊರೆತಂತಾಗಿದೆ. ಈ ಮೂಲಕ ಸಿವಿಲ್ ಎಂಜಿನಿಯರ್‌ಗಳ ಜವಾಬ್ದಾರಿ ಹೆಚ್ಚಾಗಿದೆ ಎಂದು ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿನಿಯರ್‌ಗಳ ಮಸೂದೆ (ಕೆಪಿಸಿಇಎ) ಸಲಹೆಗಾರ ಡಿ. ರಂಗನಾಥ್‌ ಹೇಳಿದರು. 

ಇನ್ನು ಮುಂದೆ ಕಂಡಕಂಡವರು ಎಂಜಿನಿಯರ್ ಎಂದು ಹೇಳಿಕೊಳ್ಳುವಂತಿಲ್ಲ. ನೋಂದಾಯಿತ ಸಿವಿಲ್ ಎಂಜಿನಿಯರ್ ಮಾತ್ರ ಎಂಜಿನಿಯರ್‌  ಆಗಿರುತ್ತಾರೆ. ನೋಂದಾಯಿತ ಎಂಜಿನಿಯರ್‌ಗಳ ಸಹಿ ಇಲ್ಲದ ಕಟ್ಟಡದ ನಕ್ಷೆಗೆ ಸಂಬಂಧಿಸಿದ ಪ್ರಾಧಿಕಾರಗಳು ಅನುಮೋದನೆ ನೀಡುವಂತಿಲ್ಲ. ಎಂಜಿನಿಯರ್ ಅಲ್ಲದವರು ನಕ್ಷೆ ಕೊಟ್ಟು, ಮನೆ ನಿರ್ಮಿಸಿದರೆ ಕಾನೂನು ರೀತಿ ಶಿಕ್ಷೆಗೆ ಒಳಪಡುತ್ತಾರೆ. ಅಲ್ಲದೆ, ನೋಂದಾಯಿತ ಎಂಜಿನಿಯರ್‌ಗಳ ಕಾರ್ಯ ನಿರ್ವಹಣೆ ಕೂಡ ಕಾಯ್ದೆ, ಕಾನೂನು ವ್ಯಾಪ್ತಿಗೆ ಬರಲಿದ್ದು, ಆ ಕಾನೂನು, ನಿಯಮಗಳನ್ನು ಮೀರುವ ಎಂಜಿನಿಯರ್‌ಗಳ ಮಾನ್ಯತೆ ರದ್ದು ಮಾಡಲು ಅವಕಾಶವಿರುತ್ತದೆ. ಆದ್ದರಿಂದ ಇನ್ನು ಮುಂದೆ ಸಿವಿಲ್ ಇಂಜಿನಿಯರ್‌ಗಳು ಹೆಚ್ಚು ಜವಬ್ದಾರಿಯಿಂದ ಕೆಲಸ ಮಾಡಬೇಕಿದೆ ಎಂದು  ರಂಗನಾಥ್ ಎಚ್ಚರಿಕೆ ನೀಡಿದರು.

ದಾವಣಗೆರೆ ಎಸ್ಎಸ್ ಬಡಾವಣೆಯಲ್ಲಿ ಎಫ್.ಪಿ.ಎ.ಸಿ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಡಾ|| ಮನಮೋಹನ್ ಆರ್. ಕಲ್ಕಲ್ ಉದ್ಘಾಟಿಸಿದರು. ಕಾರ್ಯಕ್ರಮದ ಸಂಚಾಲಕ ಜಿ.ಬಿ. ಸುರೇಶ್ ಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು.  ಎಫ್. ಪಿ.ಎ.ಸಿ.ಇ. ಅಧ್ಯಕ್ಷ  ಇ. ದೇವೇಂದ್ರಪ್ಪ, ಎ.ಸಿ.ಸಿ.ಇ.ಐ ಕಾರ್ಯಾಧ್ಯಕ್ಷ ವೆಂಕಟರಮಣ ರೆಡ್ಡಿ, ಕಾರ್ಯದರ್ಶಿ ಯು.ಆರ್. ಕೊಟ್ರೇಶ್, ಇಂಡಿಯನ್ ಕಾಂಕ್ರೀಟ್ ಇನ್ ಸ್ಟಿಟ್ಯೂಟ್ ಕಾರ್ಯಾಧ್ಯಕ್ಷ ಜಿ.ಎಂ. ಲೋಹಿತಾಶ್ವ, ಧಾರವಾಡದ ಐ.ಸಿ.ಐ ಕಾರ್ಯಾಧ್ಯಕ್ಷ ವಿಜಯ್, ತೋಟಿಗಾರ್, ರಾಣೇಬೆನ್ನೂರ್ ಎಂಜಿನಿಯರ್‌ ಗಳಾದ ಷಣ್ಮುಖ, ಚಿತ್ರದುರ್ಗದ ಶ್ರೀಕಾಂತ್, ಶಿವಮೊಗ್ಗದ ಸಂಜೀವ್ ಪ್ರಸಾದ್,  ಶಿವಮೊಗ್ಗದ ಜಯಚಂದ್,  ಹಿರಿಯ ಇಂಜಿನಿಯರ್‌ಗಳಾದ, ಶರಣಪ್ಪ, ಆರ್.ಎಸ್. ವಿಜಯಾನಂದ್, ಡಿ. ನಾಗರಾಜ್, ಇ.ಎಂ.ಎಸ್.  ಖಾನ್,  ಎ.ಬಿ. ರವಿ.,  ಎಂ.ಎಸ್. ಕುಮಾರ್, ಕೆ.ಎಂ.ಕೆ. ಮೂರ್ತಿ, ಪ್ರಕಾಶ್ ಮುಳೆ ಹಾಗೂ ಆರ್.ಟಿ. ಅರುಣ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!