ವೈದ್ಯಕೀಯ ಕಾಲೇಜುಗಳಿಗೆ ದಂಡ

ಎನ್ಎಂಸಿ ಕ್ರಮ ಏಕಪಕ್ಷೀಯ : ಎಐಡಿಎಸ್‌ಓ ಖಂಡನೆ

ದಾವಣಗೆರೆ, ಜು.9-  ವೈದ್ಯಕೀಯ ಕಾಲೇಜುಗಳಿಗೆ ದಂಡ ವಿಧಿಸಿರುವ ಎನ್ಎಂಸಿ ಕ್ರಮವು ಏಕಪಕ್ಷೀಯ ವಾಗಿದೆ ಎಂದು ಎಐಡಿಎಸ್‌ಓ  ಖಂಡಿಸಿದೆ.

ಈ ಸಂಬಂಧ ಹೇಳಿಕೆ ನೀಡಿರುವ ಎಐಡಿ ಎಸ್ಓನ ರಾಜ್ಯ ಕಾರ್ಯದರ್ಶಿ ಅಜಯ ಕಾಮತ್,   ರಾಜ್ಯದ ಹಲವು ವೈದ್ಯಕೀಯ ಕಾಲೇಜು ಗಳಿಗೆ ನೋಟಿಸ್ ಜಾರಿ ಮಾಡಿರುವ ಎನ್ಎಂಸಿಯು, ಕಾಲೇಜು ನಡೆಸಲು ಅಪೇಕ್ಷಿತ ಗುಣಮಟ್ಟವನ್ನು ಹೊಂದದಿರುವುದಕ್ಕೆ ದಂಡ ವಿಧಿಸಿದೆ.

ರಾಜ್ಯದ 13 ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ 11 ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ದಂಡ ವಿಧಿಸಲಾಗಿದೆ. ದಂಡದ ಮೊತ್ತವು 2 ಲಕ್ಷ ರೂಪಾಯಿಯಿಂದ 15 ಲಕ್ಷದ ವರೆಗೂ ಇದೆ. ವೈದ್ಯಕೀಯ ಕಾಲೇಜುಗಳು ಅಪೇಕ್ಷಿತ ಗುಣಮಟ್ಟವನ್ನು ಕಾಪಾಡಲೇಬೇಕು, ಆದರೆ ಈ ರೀತಿ ದಂಡ ವಿಧಿಸುವುದು ಅತ್ಯಂತ ಅಪ್ರಜಾತಾಂತ್ರಿಕವಾಗಿದೆ ಎಂದಿದ್ದಾರೆ.

 ಎನ್ಎಂಸಿಯ ಈ ನಡೆಯು ಗುಣಮಟ್ಟದ ಶಿಕ್ಷಣದ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಿಬ್ಬಂದಿಗಳ ಸಂಖ್ಯೆಯು ಕಡಿಮೆ ಇದ್ದು, ಮೂಲ ಸೌಕರ್ಯಗಳು ಅವಶ್ಯಕ ಮಟ್ಟದಲ್ಲಿ ಇರದಿದ್ದರೆ, ಇದರ ಜವಾಬ್ದಾರಿ ಹೊತ್ತು ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವ ಮತ್ತು ಸಮರ್ಪಕ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ಆಡಳಿತ ವರ್ಗವೇ ವಹಿಸಿಕೊಳ್ಳಬೇಕು ಮತ್ತು ಈ ನಿಟ್ಟಿನಲ್ಲಿ ಸಮರ್ಪಕ ಅನುದಾನ ಒದಗಿಸಬೇಕು. 

ಸರ್ಕಾರಿ ವೈದ್ಯಕೀಯ ಕಾಲೇಜುಗಳ ಅವ್ಯವಸ್ಥೆಯ ಕುರಿತು ಹಲವಾರು ವರದಿಗಳು ವಿವರಿಸಿವೆ. ರಾಜ್ಯ ಸರ್ಕಾರ ಅಥವಾ ಎನ್ಎಂಸಿ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಣಕಾಸು ಸಹಾಯ ಒದಗಿಸುವುದರ ಬದಲಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್ಐ ಕೋಟಾ ತೆರೆದು ದುಡ್ಡು ಮಾಡಲು ಯತ್ನಿಸುತ್ತಿದೆ ಎಂದು ಅವರು ದೂರಿದ್ದಾರೆ.

error: Content is protected !!