ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಕೆ.ಜಿ. ಪ್ರತಾಪ್‌ ಆತ್ಮಹತ್ಯೆ

ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಕೆ.ಜಿ. ಪ್ರತಾಪ್‌ ಆತ್ಮಹತ್ಯೆ

ಹೊನ್ನಾಳಿ, ಜು. 8 – ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರ ಹಿರಿಯ ಪುತ್ರಿಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ತಾಲ್ಲೂಕಿನ ಅರಕೆರೆ ಸಮೀಪದಲ್ಲಿರುವ ಅರಣ್ಯ ಪ್ರದೇಶದ ಸಮೀಪ ಬಿ.ಸಿ.ಪಾಟೀಲ್ ಅಳಿಯ ಕೆ.ಜಿ.ಪ್ರತಾಪ್ ಕುಮಾರ್ (41) ಅವರು ತಮ್ಮ ವೆನ್ಯೂ ಕಾರನ್ನು (ಕೆ.ಎ.68 ಎಂ 1458) ರಸ್ತೆಯ ಬದಿಗೆ ನಿಲ್ಲಿಸಿ ವಿಷ ಸೇವನೆ ಮಾಡಿದ್ದಾರೆ. ಕಾರಿನಲ್ಲಿ ವಿಷದ ಬಾಟಲ್ ಲಭ್ಯವಾಗಿದ್ದು ಇದನ್ನು ಗಮನಿಸಿದ ಸ್ಥಳೀಯರು ಕೆ.ಜಿ.ಪ್ರತಾಪ್ ಕುಮಾರ್ ಅವರನ್ನು ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದು ಕೊಂಡು ಹೋಗುವಂತೆ ನೀಡಿದ ಸಲಹೆ ಮೇರೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಯಾವ ಕಾರಣಕ್ಕೆ ವಿಷ ಸೇವನೆ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.

ಮೃತ ಕೆ.ಜಿ.ಪ್ರತಾಪ್ ಕುಮಾರ್ ಅವರು ಬಿ.ಸಿ.ಪಾಟೀಲ್ ಅವರ ಪತ್ನಿ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ವನಜಾ ಅವರ ಸಹೋದರನಾಗಿದ್ದು, ತಮಗೆ ಗಂಡು ಮಕ್ಕಳಿಲ್ಲದೇ ಇದ್ದ ಕಾರಣ ತಮ್ಮ ಹಿರಿಯ ಮಗಳಾದ ಸೌಮ್ಯ ಅವರನ್ನು ಅಳಿಯ ಕೆ.ಜಿ.ಪ್ರತಾಪ್ ಕುಮಾರ್ ಅವರ ಜೊತೆಗೆ ಕಳೆದ 15 ವರ್ಷಗಳ ಹಿಂದೆ ವಿವಾಹ ಮಾಡಲಾಗಿದ್ದು, ವಿವಾಹದ ನಂತರ ಪ್ರತಾಪ್ ಕುಮಾರ್ ಅವರು ಬಿ.ಸಿ.ಪಾಟೀಲ್ ಅವರ ಜೊತೆಯಲ್ಲೇ ಇದ್ದು ಕೊಂಡು ಕೃಷಿ ವ್ಯವಹಾರಗಳನ್ನು ಮತ್ತು ಮಾವನ ರಾಜಕೀಯದ ಆಗು-ಹೋಗುಗಳನ್ನು ನೋಡಿಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.

ಪ್ರತಾಪ್ ಕುಮಾರ್ ಅವರು ಹಿರೇಕೆರೂರಿನಿಂದ ಸ್ವಗ್ರಾಮವಾದ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮಕ್ಕೆ ಹೋಗಿ ಬರುತ್ತೇನೆಂದು ಸೋಮವಾರ ಬೆಳಿಗ್ಗೆ ಮಾವ ಬಿ.ಸಿ.ಪಾಟೀಲ್ ಅವರಿಗೆ ತಿಳಿಸಿ ಹೋಗಿದ್ದರು.

ನಂತರ ಪ್ರತಾಪ್ ಕುಮಾರ್ ಅವರ ಸಹೋದರ ಪ್ರಭುದೇವ್ ಅವರು ಬಿ.ಸಿ.ಪಾಟೀಲ್ ಅವರಿಗೆ ಕರೆ ಮಾಡಿ ಪ್ರತಾಪ್ ವಿಷ ಸೇವಿಸಿದ್ದು ಮೊಬೈಲ್ ಸ್ವಿಚ್ ಆಫ್ ಆಗಿದ್ದು ಪತ್ತೆ ಮಾಡುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರು ದಾವಣಗೆರೆಯ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ಮತ್ತು ಹೊನ್ನಾಳಿ ಪೊಲೀಸ್ ಇನ್ಸಪೆಕ್ಟರ್ ಎಚ್. ಸುನಿಲ್ ಕುಮಾರ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಪತ್ತೆ ಹಚ್ಚುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆ ಮೇರೆಗೆ ಪೊಲೀಸ್ ಇನ್ಸಪೆಕ್ಟರ್ ಎಚ್.ಸುನಿಲ್ ಕುಮಾರ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತಮ್ಮ ಸಿಬ್ಬಂದಿಗಳನ್ನು ಪ್ರತಾಪ್ ಕುಮಾರ್ ಅವರ ಪತ್ತೆಗೆ ನಿಯೋಜಿಸಿದ್ದರು.

ಇದುವರೆಗೂ ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಾಗಿರುವುದಿಲ್ಲವೆಂದು ಎಂದು ಪೊಲೀಸ್ ಮೂಲಗಳಿಂದ ಪತ್ರಿಕೆಗೆ ಮಾಹಿತಿ ಲಭ್ಯವಾಗಿರುತ್ತದೆ.

error: Content is protected !!