ಜನತೆ ಮುಂದೆ ಪ್ರಧಾನಿ ಕ್ಷಮೆ ಕೇಳಲು ದಿನೇಶ್ ಶೆಟ್ಟಿ ಆಗ್ರಹ
ದಾವಣಗೆರೆ, ಜು. 8 – ಕೇಂದ್ರ ಸರ್ಕಾರವು ಕಳೆದ 3 ತಿಂಗಳ ಹಿಂದೆಯಷ್ಟೇ ಜಾರಿಗೆ ತಂದ ಭಾರತ್ ಅಕ್ಕಿ ಯೋಜನೆಯನ್ನು ರದ್ದುಗೊಳಿಸಿರುವುದನ್ನು ಖಂಡಿಸಿ, ಜಿಲ್ಲಾ ಕಾಂಗ್ರೆಸ್‍ನಿಂದ ಮಹಾನಗರ ಪಾಲಿಕೆಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಕೇವಲ 3-4 ತಿಂಗಳ ಹಿಂದೆ ಚುನಾವಣೆ ಗಿಮಿಕ್‍ಗಷ್ಟೇ 29ರೂ ಕೆ.ಜಿ ಅಕ್ಕಿ ನೀಡುವ ಯೋಜನೆ ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಆ ಯೋಜನೆಯನ್ನು ರದ್ದುಗೊಳಿಸುವ ಮೂಲಕ ದೇಶದ ಜನತೆಗೆ ದ್ರೋಹ ಬಗೆದಿದ್ದು, ದೇಶದ ಜನರ ಮುಂದೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಭಾರತ್ ಅಕ್ಕಿ ಮಹಾತ್ವಾಕಾಂಕ್ಷೆ ಯೋಜನೆಯೆಂದು ಬಿಂಬಿಸಿದ ಬಿಜೆಪಿಗರು ಇಂದು ಯೋಜನೆ ಸ್ಥಗಿತಗೊಳಿಸಿರುವುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ರಾಜ್ಯ ಸರ್ಕಾರ ನೀಡುತ್ತಿರುವ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿಗರಿಗೆ ನೈತಿಕತೆ ಇದ್ದರೆ ಪ್ರಧಾನಿ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ದೇಶದ ಜನತೆಗೆ ಏನನ್ನೂ ನೀಡದೇ ಲಕ್ಷಾಂತರ ಕೋಟಿ ಸಾಲ ಮಾಡಿದೆ. ಆದರೆ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಪ್ರತಿ ತಿಂಗಳು ಒಂದು ಕುಟುಂಬ ಜೀವನ ನಡೆಸುವಂತಹ ಯೋಜನೆಗಳನ್ನು ನೀಡುತ್ತಿದ್ದರೂ ಸಹ ರಾಜ್ಯ ಬಿಜೆಪಿ ಮುಖಂಡರು ರಾಜ್ಯ ಸರ್ಕಾರವನ್ನು ಲೇವಡಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಮಹಾನಗರ ಪಾಲಿಕೆ ಮಹಾಪೌರರಾದ ವಿನಾಯಕ ಪೈಲ್ವಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್, ಎಸ್.ಮಲ್ಲಿಕಾರ್ಜುನ್, ಹೆಚ್. ಜಯಣ್ಣ, ಉದಯಕುಮಾರ್, ಮೈನುದ್ದೀನ್, ಇಟ್ಟಿಗುಡಿ ಮಂಜುನಾಥ್, ಡೋಲಿ ಚಂದ್ರು, ಆವರಗೆರೆ ಪರಮೇಶ್, ಪರಶುರಾಮ್, ಚೈತನ್ಯಕುಮಾರ್, ಶುಭಮಂಗಳ, ಮಂಗಳಮ್ಮ, ಮಂಜಮ್ಮ, ರುದ್ರಮ್ಮ, ರಾಕೇಶ್, ಸದ್ದಾಂ, ಲಿಯಾ ಕತ್ ಅಲಿ, ವಿನಾಯಕ, ಮೊಟ್ಟೆ ದಾದಾಪೀರ್, ಗೀತಾ ಚಂದ್ರಶೇಖರ್, ಉಮಾ ಕುಮಾರ್, ಸುರೇಶ್ ಜಾಧವ್, ವೀರಭದ್ರಸ್ವಾಮಿ, ಸಲ್ಮಾ ಬಾನು, ಶಿಲ್ಪ, ಸುನೀತಾ ಭೀಮಣ್ಣ, ರೇಣುಕಮ್ಮ, ತೋಳಹುಣಸೆ ಶ್ರೀನಿವಾಸ್ ಮತ್ತಿತರರಿದ್ದರು.