ಹೆಚ್ಚಿನ ಬೆಲೆಗೆ ಗೊಬ್ಬರ, ಕೀಟನಾಶಕ ಮಾರಾಟ : ರೈತರ ಆಕ್ರೋಶ

ಹೆಚ್ಚಿನ ಬೆಲೆಗೆ ಗೊಬ್ಬರ, ಕೀಟನಾಶಕ ಮಾರಾಟ : ರೈತರ ಆಕ್ರೋಶ

ಹರಿಹರದಲ್ಲಿ ಪ್ರತಿಭಟನೆ

ಹರಿಹರ, ಜು.8- ಸರ್ಕಾರ ರೈತರ ಹಲವಾರು ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿ, ರೈತ ಸಂಘ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಗುರುಬಸವರಾಜ್‌ ಅವರಿಗೆ ಮನವಿ ಸಲ್ಲಿಸಿತು.

ಪಕ್ಕೀರಸ್ವಾಮಿ ಮಠದ ಆವರಣದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯರಸ್ತೆ ಮೂಲಕ ಸಂಚರಿಸಿ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಈ ವೇಳೆ ರೈತ ಸಂಘದ ಮುಖಂಡ ತೇಜಸ್ವಿ ಪಟೇಲ್‌ ಮಾತನಾಡಿ, ರೈತರು ಪಡೆದಿರುವ ಕೃಷಿ ಸಾಲಕ್ಕೆ ಎಲ್ಲಾ ಬ್ಯಾಂಕಿನವರು ನೋಟಿಸ್ ನೀಡುವುದಕ್ಕೆ ಮುಂದಾಗಿದ್ದು, ಮನೆ, ಹೊಲಗಳ ಜಪ್ತಿಗೆ ಮುಂದಾಗಿದ್ದಾರೆ. ಬರಗಾಲ ದಲ್ಲಿ ರೈತರು ಸಂಕಷ್ಟದ ದಿನಗಳನ್ನು ಎದುರಿಸುತ್ತಿ ರುವುದರಿಂದ ಸರ್ಕಾರ ಕೂಡಲೇ ಎಲ್ಲಾ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಅನೇಕ ಗ್ರಾಮಗಳಲ್ಲಿ ಕಳೆದ 30-40 ವರ್ಷಗಳ ಕಾಲ ಬಗರ್‌ ಹುಕ್ಕುಂ ಸಾಗುವಳಿ ಮಾಡಿರುವ ರೈತರಿಗೆ ಹಕ್ಕುಪತ್ರ, ಸಾಗುವಳಿ ಪತ್ರವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಹಲವಾರು ರಸಗೊಬ್ಬರ ಅಂಗಡಿಗಳಲ್ಲಿ ರಸಗೊಬ್ಬರ, ಕೀಟನಾಶಕಗಳನ್ನು  ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅದಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳು ದುಪ್ಪಟ್ಟು ದರದಲ್ಲಿ ಮಾರಾಟ ಮಾಡುವ ಅಂಗಡಿ ಯವರ ಮೇಲೆ ಪ್ರಕರಣ ದಾಖಲು ಮಾಡುವುದಕ್ಕೆ ಮುಂದಾಗಬೇಕು. 

ಕೃಷಿ ವಿದ್ಯುತ್ ಸಂಪರ್ಕವನ್ನು ಪಡೆಯುವುದಕ್ಕೆ 2 ರಿಂದ 3 ಲಕ್ಷ ರೂ.ವೆಚ್ಚವಾಗುತ್ತದೆ. ಆದ್ದರಿಂದ ಹಿಂದೆ ಇದ್ದ ಅಕ್ರಮ ಸಕ್ರಮ ಯೋಜನೆಯನ್ನು ತಕ್ಷಣವೇ
ಜಾರಿಗೆ ತರಬೇಕು. ಜೊತೆಗೆ ತಾಲ್ಲೂಕಿನಲ್ಲಿ ತೆಂಗು ಬೆಳೆಗಳು ಸುಶಿ ರೋಗಕ್ಕೆ ತುತ್ತಾಗುತ್ತಿದ್ದು, ತೋಟಗಾರಿಕೆ ಇಲಾಖೆ ವತಿಯಿಂದ ಪರಿಹಾರವನ್ನು ನೀಡುವುದಕ್ಕೆ ಮುಂದಾಗಬೇಕು‌. 

ಸರ್ವೆ ಇಲಾಖೆಯ ಅಧಿಕಾರಿಗಳು ಜಮೀನು ಹದ್ದು ಬಸ್ತು ಹಾಗೂ ಪೋಡಿ ಮತ್ತು ಸ್ಕೆಚ್ ಮಾಡಿ ಕೊಡಲು ವಿಳಂಬವನ್ನು ಜೊತೆಗೆ ತಾರತಮ್ಯ ಮಾಡುವುದನ್ನು ನಿಲ್ಲಿಸಬೇಕು. ಡೀಸೆಲ್, ಪೆಟ್ರೋಲ್ ದರದಲ್ಲಿ ರೈತರಿಗೆ ರಿಯಾಯಿತಿ ನೀಡುವುದಕ್ಕೆ ಮುಂದಾಗಬೇಕು‌. ತಾಪಂ ಇಲಾಖೆಯ ವತಿಯಿಂದ ಮನೆ ಕಂದಾಯ, ನೀರಿನ ಕಂದಾಯ ವಸೂಲಿ ಮಾಡುವುದನ್ನು ನಿಲ್ಲಿಸಿ ರೈತರಿಗೆ ಅನುಕೂಲ ಮಾಡಬೇಕು ಎಂದು ಹೇಳಿದರು.

ರೈತ ಮುಖಂಡ ನಂದಿತಾವರೆ ಶಂಭುಲಿಂಗಪ್ಪ ಮಾತನಾಡಿ, ತಹಶೀಲ್ದಾರ್ ಗುರುಬಸವರಾಜ್ ತಾಲ್ಲೂಕಿನ ರೈತರ ಕಷ್ಟಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ರೈತರು ಕಷ್ಟಗಳನ್ನು ಹೇಳಿಕೊಂಡು ಕಚೇರಿಗೆ ಬಂದಾಗ ರೈತರ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ ಎಂದು ಅವರ ಎದುರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು. 

ರೈತ ಸಂಘದ ಜಿಲ್ಲಾಧ್ಯಕ್ಷ ಹಾಳೂರು ನಾಗರಾಜ್, ಮಾಕನೂರು ಈರಣ್ಣ ಬಣಕಾರ ಮತ್ತು ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿ ನಾರನಗೌಡ, ತೋಟಗಾರಿಕೆ ಇಲಾಖೆ ಅಧಿಕಾರಿ ಶಶಿಧರ್, ಸಿಪಿಐ ಸುರೇಶ್ ಸರಗಿ, ಪಿಎಸ್ಐಗಳಾದ ಶ್ರೀಪತಿ ಅಗ್ನಿ, ಮಂಜುನಾಥ್ ಕುಪೇಲೂರು.  ರೈತ ಸಂಘದ  ತಾಲ್ಲೂಕು ಅಧ್ಯಕ್ಷ ಹೆಚ್.ಬಿ. ಬಸವರಾಜಪ್ಪ, ಖಜಾಂಚಿ ಮಹೇಶ್ವರಪ್ಪ ದೊಗ್ಗಳ್ಳಿ, ಹೆಚ್.ಸಿ ತಿಪ್ಪೇಸ್ವಾಮಿ, ಪ್ರಕಾಶ್ ಭಾನುವಳ್ಳಿ, ಕೆ.ವಿ‌. ರುದ್ರಮುನಿ, ಕೆ.ಜಿ. ಚಂದ್ರಶೇಖರಪ್ಪ, ರೇವಣಸಿದ್ದಪ್ಪ, ಕುಂಬಳೂರು ಅಂಜಿನಪ್ಪ, ದಿಳ್ಳೆಪ್ಪ, ಧರ್ಮಪ್ಪ, ರಂಗಪ್ಪ, ಶೇಖರಪ್ಪ, ನಾಗಪ್ಪ, ಚಂದ್ರಪ್ಪ ಅಮರಾವತಿ, ಕೆ.ಜಿ. ಮಂಜುನಾಥ್, ಪರಮೇಶ್ವರಪ್ಪ ಕೆಂಚನಹಳ್ಲಿ, ಹೆಚ್ ವೀರಪ್ಪ, ವಸಂತ್, ನಂದೀಶ್ ಮತ್ತಿತರರು ಇದ್ದರು.

error: Content is protected !!