ದಾವಣಗೆರೆ, ಜು. 8- ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ 37ನೇ ವರ್ಷದ ಜನ್ಮ ದಿನ ಹಾಗೂ ದೀಕ್ಷಾ ರಜತ ಮಹೋತ್ಸವನ್ನು ಭೋವಿ ಜನೋತ್ಸವವಾಗಿ ಚಿತ್ರದುರ್ಗದಲ್ಲಿ ಇದೇ ದಿನಾಂಕ 20 ರಂದು ಆಚರಿಸಲು ನಿರ್ಧರಿಸಲಾಯಿತು.
ನಗರದ ಅಪೂರ್ವ ಹೋಟೆಲ್ ಸಭಾಂಗಣ ದಲ್ಲಿ ನಿನ್ನೆ ಸೇರಿದ್ದ ಭೋವಿ ಸಮಾಜದ ಮುಖಂಡರು ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಅದ್ಧೂರಿಯಾಗಿ ಆಚರಣೆ ಮಾಡುವ ಬಗ್ಗೆ ಸಭೆ ನಡೆಸಿ ನಿರ್ಣಯಿಸಿದರು.
ಸಭೆಯ ಸಾನ್ನಿಧ್ಯ ವಹಿಸಿದ್ದ ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತ ನಾಡಿ, ಕರ್ನಾಟಕವಲ್ಲದೇ ಇತರೆ ರಾಜ್ಯದ ಸಮುದಾಯದ ಮುಖಂಡರು ಭಾಗಿಯಾಗಲಿದ್ದು, ಕಾರ್ಯ ಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ ಎಂದರು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಹೆಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಭಾಗಿಯಾಗುವರು ಎಂದು ತಿಳಿಸಿದರು.
ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥರು, ಕನಕ ಗುರುಪೀಠದ ಜಗದ್ಗುರು, ಹಿಂದುಳಿದ, ದಲಿತ ಮಠಾಧೀಶರು ಸೇರಿ ರಾಜ್ಯದ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಅಂದು ಬೆಳಿಗ್ಗೆ ಧರ್ಮ ಸಂಸತ್ತು ಜರುಗಲಿದೆ.
ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ, ಯುಪಿಎಸ್‌ಸಿ ಸಾಧಕರಿಗೆ ಸನ್ಮಾನ, ರಕ್ತದಾನ ಮತ್ತು ಆರೋಗ್ಯ ಶಿಬಿರ, ವಧು-ವರರ ಸಮಾವೇಶವನ್ನೂ ಸಂಘಟಿಸ ಲಾಗುತ್ತಿದೆ. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಸಮ ಸಮಾಜದ ಬದುಕಿಗಾಗಿ ನಾವು ಪ್ರಜ್ಞಾವಂತರಾಗಬೇಕಿದೆ. ಆಯಾ ಕಾಲಕ್ಕನುಸಾರ ಹಕ್ಕುಗಳಿಗಾಗಿ ಸಮಾವೇಶ ನಡೆಸುವ ಮೂಲಕ ರಾಜಕಾರಣಿಗಳನ್ನು ಸ್ಥಾನಮಾನದ ಮೂಲಕ ದಡ ಸೇರಿಸಲಾಗಿದೆ ಎಂದ ಶ್ರೀಗಳು, ಜು. 20ರಂದು ನಡೆಯುವ ಭೋವಿ ಜನೋತ್ಸವವು ಸಮಾಜದ ಮುಂದಿನ ದಿಕ್ಸೂಚಿ ಆಗಲಿದೆ ಎಂದರು.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಮಾತನಾಡಿ, ಸಮಾ ಜದ ಬಲವರ್ಧನೆಗಾಗಿ ಸ್ವಾಮೀಜಿ ಅವರೊಂದಿಗೆ ರಾಜ್ಯವ್ಯಾಪಿ ಪ್ರವಾಸ ಮಾಡುತ್ತಿದ್ದೇವೆ. ಕಾರ್ಯ ಕ್ರಮ ಆಚರಣೆ ಸಂಬಂಧ ಬೆಂಗಳೂರಲ್ಲಿ ಸಚಿವರೊಂ ದಿಗೆ ಸಭೆ ನಡೆಸಿ ರೂಪರೇಷೆ ನಿರ್ಧರಿಸಲಾಗಿದೆ.ಸಿದ್ಧರಾಮೇಶ್ವರ ಸ್ವಾಮೀಜಿ ಅವರು 25 ವರ್ಷ ದಿಂದ ಸಮಾಜ ಕಟ್ಟಿ ಬೆಳೆಸುತ್ತಿದ್ದಾರೆ. ಅವರ ಶಕ್ತಿ ಬಲ ಪಡಿಸಿ, ಮಠವನ್ನು ಮತ್ತಷ್ಟು ಬೆಳೆಸೋಣ ಎಂದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಎಲ್ಲಾ ರಂಗಗಳಲ್ಲಿ ಸಮಾಜ ಗುರುತಿಸುವಷ್ಟರ ಮಟ್ಟಿಗೆ ಸಮಾಜವನ್ನು ಸಂಘಟಿಸಿದ್ದಾರೆ. ಮಠ ಸಾಮಾಜಿಕ ಪ್ರಜ್ಞೆ ಮೂಡಿಸಿದೆ ಎಂದು ಸ್ಮರಿಸಿದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ಹೆಚ್. ಜಯಣ್ಣ ಮಾತನಾಡಿ, ಭೋವಿ ಜನೋತ್ಸವ ಕೇವಲ ಚಿತ್ರದುರ್ಗದಲ್ಲಿ ನಡೆದರೆ ಸಾಲದು, ಪ್ರತಿ ವರ್ಷ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸಬೇಕು. ತರಳ ಬಾಳು ಉತ್ಸವದ ಮಾದರಿಯಲ್ಲಿ ದೇಣಿಗೆ ಹಣ ದಲ್ಲಿ ಕಾರ್ಯಕ್ರಮ ಆಯೋಜಿಸಿದ ಹಾಸ್ಟೆಲ್, ಶಾಲೆ, ಸಮುದಾಯ ಭವನ ನಿರ್ಮಾಣ ಆದಲ್ಲಿ ಅರ್ಥಪೂ ರ್ಣವಾಗಲಿದೆ ಎಂದು ಸಲಹೆ ನೀಡಿದರು.
ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಬಿ.ಟಿ. ಸಿದ್ದಪ್ಪ, ಮುಖಂಡ ಬಿ.ಎಸ್. ಶ್ಯಾಮ್, ಚನ್ನಗಿರಿ ತಾಲ್ಲೂಕು ಅಧ್ಯಕ್ಷ ರಾಜಪ್ಪ, ಜಗಳೂರು ತಾಲ್ಲೂಕು ಅಧ್ಯಕ್ಷ ಅರ್ಜುನ್, ಹರಿಹರ ತಾಲ್ಲೂಕು ಅಧ್ಯಕ್ಷ ವೀರಭದ್ರಪ್ಪ, ಹೊನ್ನಾಳಿ ತಾಲ್ಲೂಕು ಉಪಾಧ್ಯಕ್ಷ ಚಂದ್ರಪ್ಪ, ಬೆಂಕಿಕೆರೆ ಹನುಮಂತಪ್ಪ, ಶ್ರೀನಿವಾಸ್, ಮಂಜುನಾಥ್ ಇತರರಿದ್ದರು.