ರಾಣೇಬೆನ್ನೂರು, ಜು. 7 – ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಒಪಿಎಸ್ ಜಾರಿಗೊಳಿಸುವ ಮತ್ತು ಜ್ಯೋತಿ ಸಂಜೀವಿನಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಅನುದಾನಿತ ಶಾಲಾ- ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಣೇಬೆನ್ನೂರು ತಾಲ್ಲೂಕು ಮಟ್ಟದ ಪದಾಧಿಕಾರಿಗಳು ತಹಶೀಲ್ದಾರ್ ಕೆ. ಗುರು ಬಸವರಾಜ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರತಿನಿಧಿ ಮಲ್ಲಿಕಾರ್ಜುನ ಬಾವಿಕಟ್ಟಿ ಮಾತನಾಡಿ ಈಗಾಗಲೇ ರಾಜ್ಯದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ನಮ್ಮಗಳ ಬೇಡಿಕೆಗಾಗಿ ಮನವಿ ಸಲ್ಲಿಸಿದ್ದೇವೆ, ಕೆಲವು ದಿನಗಳ ಹಿಂದೆ ತುಮಕೂರಿನಿಂದ ಬೆಂಗಳೂರವರೆಗೆ ಪಾದಯಾತ್ರೆ ಮಾಡಿ 143 ದಿನ ಫ್ರೀಡಂ ಪಾರ್ಕ್‌ನಲ್ಲಿ ನಿರಂತರ ಹೋರಾಟ ಮಾಡಿದರೂ ಸಹ ಸರ್ಕಾರ ನಮ್ಮ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಮುಖ್ಯೋಪಾಧ್ಯಾಯ ಪ್ರಕಾಶ ಜೆ. ಸೋಮನಗೌಡ್ರು, ಅನುದಾನಿತ ಪ್ರಾ.ಶಾ. ಶಿಕ್ಷಕರ ಸಂಘದ ಕಿತ್ತೂರು ಕರ್ನಾಟಕದ ವಿಭಾಗಿಯ ಸಂಚಾಲಕರಾದ ನಾಗರಾಜ ನಲವಾಗಲ, ಜಿಲ್ಲಾ ಕಾರ್ಯದರ್ಶಿಗಳಾದ ಮಾರುತಿ ಲಮಾಣಿ, ತಾಲ್ಲೂಕು ಅಧ್ಯಕ್ಷ ಎಸ್.ಹೆಚ್ ಪಾಟೀಲ್, ಕಾರ್ಯದರ್ಶಿಗಳಾದ ಬಸವರಾಜ ನಾಯಕ್, ಬಸವರಾಜ ಶಾಮನೂರು, ಬಸವರಾಜಯ್ಯ ತಾವರಗೇರಿಮಠ, ಎಂ.ಹೆಚ್. ಪಾಟೀಲ್, ಚಂದ್ರುಗ್ಯಾನಗೌಡ್ರು, ಮಾಲತೇಶ್ ಹಿರೇಮಠ, ಎಫ್.ಜೆ. ಪಿಂಜಾರ್, ರೇವಣಸಿದ್ದಯ್ಯ ಹಿರೇಮಠ ಇತರರು ಇದ್ದರು.