ಬ್ಯಾಂಕ್ ನಿವೃತ್ತರ ಒಕ್ಕೂಟ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪೆನ್ಷನರ್ ಕಮ್ಯೂನ್ ಕಾರ್ಯಕ್ರಮದಲ್ಲಿ ಜಿ. ರಂಗಸ್ವಾಮಿ ಕಳಕಳಿ
ದಾವಣಗೆರೆ, ಜು. 7- ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆರ್ಥಿಕ ನೆರವು ನೀಡುತ್ತಿರುವ ಕಾರ್ಯ ಶ್ಲ್ಯಾಘನೀಯ. ಹಸಿದವರಿಗೆ ಮತ್ತು ಕಡುಬಡವರಿಗೆ ನೆರವು ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ದಾವಣಗೆರೆ – ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟದ ಗೌರವಾಧ್ಯಕ್ಷ ಜಿ. ರಂಗಸ್ವಾಮಿ ಹೇಳಿದರು.
ನಗರದ ತರಳಬಾಳು ಬಡಾವಣೆಯಲ್ಲಿರುವ ಶರಣ ಮಾಗನೂರು ಬಸಪ್ಪ ಪಿಯು ಕಾಲೇಜಿನ ಸಭಾಂಗಣದಲ್ಲಿ ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪೆನ್ಷನರ್ ಕಮ್ಯೂನ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 75 ವರ್ಷಕ್ಕೂ ಮೇಲ್ಪಟ್ಟ ನಿವೃತ್ತ ಬ್ಯಾಂಕ್ ಅಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಾನೂ ಕೂಡ ಹಳ್ಳಿಯಿಂದಲೇ ಬಂದವನಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳ ಸಮಸ್ಯೆಗಳ ಅರಿವಿದೆ. ಒಕ್ಕೂಟದಿಂದ ಇನ್ನೂ ಹೆಚ್ಚಿನ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಪ್ರೋತ್ಸಾಹದ ಅಗತ್ಯವಿದೆ. ಪ್ರಸ್ತುತ ಬ್ಯಾಂಕ್ ನಿವೃತ್ತರ ಸಾಮಾಜಿಕ ಕಾಳಜಿ, ಸಹಕಾರ ಮನೋಭಾವ ಮೆಚ್ಚುವಂತಹದ್ದು, ಎಸ್ಬಿಎಂ ಪೆನ್ಷನರ್ ಕಮ್ಯೂನ್ ಸದಸ್ಯರು ಮತ್ತಷ್ಟು ಸಮಾಜ ಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಒಕ್ಕೂಟದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಗ್ರಾಮೀಣ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪೋಷಕರಷ್ಟೇ ಅಲ್ಲದೇ ಇಡೀ ಸಮಾಜವೇ ಪ್ರೋತ್ಸಾಹಿಸುವ ಹೊಣೆಗಾರಿಕೆಯಾಗಿದೆ ಎಂದರು.
ಎಸ್ಬಿಎಂ ಪೆನ್ಷನರ್ ಕಮ್ಯೂನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ನ್ಯಾಮತಿ ಮಾತನಾಡಿ, ಶೈಕ್ಷಣಿಕ ಸಾಧನೆಗೆ ಸಹಕಾರ, ಪ್ರೋತ್ಸಾಹ ನೀಡುವ ಇಂ ತಹ ಸಮಾಜಮುಖಿ ಕಾರ್ಯಗಳಿಂದ ಸಮಾಜದ ಮೇಲಿನ ಋಣಭಾರ ಕಡಿಕೊಳ್ಳಬಹುದು ಎಂದು ಹೇಳಿದರು.
ಉತ್ತಮ ಕಾರ್ಯಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಲು ವಿದೇಶಗಳಲ್ಲಿರುವ ದಾನಿಗಳು ಸಹ ಮುಂದೆ ಬಂದಿದ್ದು, ಹಣದ ಸದ್ವಿನಿಯೋಗವಾಗುವಂತೆ ನೋಡಿ ಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಆಲ್ ಇಂಡಿಯಾ ಸಿಂಡಿಕೇಟ್ ಬ್ಯಾಂಕ್ ನಿವೃತ್ತರ ಸಂಘದ ಸಂಘಟನಾ ಕಾರ್ಯದರ್ಶಿ ಕೆ. ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆ ಪ್ರೋತ್ಸಾ ಹಿಸುವ ಇಂತಹ ಕಾರ್ಯಕ್ರಮ ಮಾದರಿಯಾದುದು. ವಿದ್ಯಾರ್ಥಿಗಳು ಧನ ಸಹಾಯವನ್ನು ಶೈಕ್ಷಣಿಕ ಪ್ರಗತಿಗಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದಾವಣಗೆರೆ – ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟದ ಅಧ್ಯಕ್ಷ ಎಸ್.ಟಿ. ಶಾಂತಗಂಗಾಧರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್ಬಿಎಂ ಪೆನ್ಷನರ್ ಕಮ್ಯೂನ್ ಸದಸ್ಯ ಸೂರ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಜಿ.ಬಿ. ಶಿವಕುಮಾರ್, ಹೆಚ್.ಕೆ. ಸತ್ಯಭಾಮ ಮಂಜುನಾಥ್, ಸುಗೀರಪ್ಪ, ಗುರುಬಸವರಾಜ್, ಪರಮೇಶ್ವರಪ್ಪ ಕೊಪ್ಪದ್, ಮಹೇಶ್ವರಪ್ಪ, ಮಧುಕರ್ ಮತ್ತಿತರರು ಭಾಗವಹಿಸಿದ್ದರು.
ಇದೇ ವೇಳೆ 75 ಕ್ಕೂ ಅಧಿಕ ವಯೋಮಾನದ ವಿವಿಧ ಬ್ಯಾಂಕುಗಳ ನಿವೃತ್ತರನ್ನು ಗೌರವಿಸಲಾಯಿತು. 37 ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂ. ನಗದು, ಉಡುಪು ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.