ಕನ್ನಡ ಸಂಸ್ಕೃತಿ ರಕ್ಷಣೆಯ ಕೆಲಸ ಮಾಡುತ್ತಿರುವ ಕಸಾಪ

ಕನ್ನಡ ಸಂಸ್ಕೃತಿ ರಕ್ಷಣೆಯ ಕೆಲಸ ಮಾಡುತ್ತಿರುವ ಕಸಾಪ

ಹರಪನಹಳ್ಳಿ ಅಂಬ್ಲಿ ದೊಡ್ಡಭರಮಪ್ಪ ಕಾಲೇಜಿನ ದತ್ತಿ ಕಾರ್ಯಕ್ರಮದಲ್ಲಿ ಡಾ.ಎಸ್.ಎಂ.ಸಿದ್ದಲಿಂಗಮೂರ್ತಿ ಶ್ಲ್ಯಾಘನೆ 

ಹರಪನಹಳ್ಳಿ, ಜು.4 – ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ ಇವುಗಳ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ  ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡುತ್ತಿದೆ ಎಂದು ಅಂಬ್ಲಿ ದೊಡ್ಡಭರಮಪ್ಪ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಂ.ಸಿದ್ದಲಿಂಗಮೂರ್ತಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಂಬ್ಲಿ ದೊಡ್ಡಭರಮಪ್ಪ ಪ್ರಥಮ ದರ್ಜೆ ಕಾಲೇಜು ಕನ್ನಡ ಸಂಘ ಇವರ ಸಂಯುಕ್ತ ಅಶ್ರಯದಲ್ಲಿ,   ಯರಬಾಸಿ  ಶ್ರೀಮತಿ  ಗಂಗಮ್ಮ ಸ್ಮರಣಾರ್ಥ ದತ್ತಿ, ಜಿ.ಹುಚ್ಚಪ್ಪ ಮತ್ತು ಶ್ರೀಮತಿ  ಹುಚ್ಚೆಂಗೆಮ್ಮ ದತ್ತಿ ಮತ್ತು ವಾಲ್ಮೀಕಿ ಬಸಪ್ಪ ತಳವಾರ ದ್ಯಾಮಪ್ಪ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಏಕೀಕರಣದ ಹೋರಾಟಗಾರರೂ ಸಾಹಿತಿಗಳೂ ವಿದ್ವಾಂಸರೂ ಮೈಸೂರಿನ ಆಡಳಿತಗಾರರೂ, ಅಧ್ಯಾಪಕರೂ, ಸಾರ್ವಜನಿಕ ಗಣ್ಯರು ಹೀಗೆ ಹಲವಾರು ಗಣ್ಯ ವ್ಯಕ್ತಿಗಳ, ನಾಡು ನುಡಿ ಸೇವಕರ ಒಂದು ಗುಂಪಿನ ಜನರ ಸಂಯುಕ್ತ ಶ್ರಮ ತ್ಯಾಗಗಳ ಫಲವಾಗಿ ರೂಪುಗೊಂಡಿದ್ದಾಗಿದೆ ಎಂದರು.

ರಂಗಭೂಮಿ, ವಚನ ಸಾಹಿತ್ಯ ಕುರಿತು ಸಾಹಿತಿ ಸುಭದ್ರಮ್ಮ ಮಾಡ್ಲಿಗೇರಿ ಮಾತನಾಡಿ, ರಂಗಭೂಮಿಯು ಆಧುನೀಕರಣ, ವಾಚನ, ಹಾಡು ಮತ್ತು ನೃತ್ಯವನ್ನು ಒಳಗೊಂಡಿರುತ್ತದೆ. ಭಾರತದಲ್ಲಿ ರಂಗಭೂಮಿ ಅಭಿವೃದ್ಧಿ ಹೊಂದಿ ಮತ್ತೆ ಪ್ರವರ್ಧಮಾನಕ್ಕೆ ಬರಲು ಆರಂಭಿಸಿ ದಂತೆ, ಮೂರು ರೀತಿಯ ಐತಿಹಾಸಿಕ ಭಾರತೀಯ ರಂಗಭೂಮಿ ವಿಕಸನಗೊಂಡಿತು. ಶಾಸ್ತ್ರೀಯ ಅವಧಿ, ಸಾಂಪ್ರದಾಯಿಕ ಅವಧಿ ಮತ್ತು ಆಧುನಿಕ ಅವಧಿ ಆಗಿದೆ ಎಂದು ವಿವರಿಸಿದರು.

ಭಾರತದಲ್ಲಿ ಪ್ರದರ್ಶನ ಕಲೆಗಳ ಸೌಂದರ್ಯವೆಂದರೆ ಅದು ಯಾವುದೇ ರೂಪವನ್ನು ತೆಗೆದುಕೊಂಡರೂ ಬದಲಾವಣೆ ಇದೆ, ಆದರೆ ನಿರಂತರತೆಯೂ ಇದೆ. ಇದು ಸಾಮಾಜಿಕ ವಿಷಯಗಳು ಮತ್ತು ರಾಜಕೀಯ ಬದಲಾವಣೆ ಯನ್ನು ವ್ಯಕ್ತಪಡಿಸುವ ಮತ್ತು ಸುಗಮಗೊಳಿಸುವಾಗ ನಾಟಕದ ಪ್ರಾಚೀನ ವಿಧಾನಗಳು ಮತ್ತು ಸಂಪ್ರದಾಯಗಳೊಂದಿಗೆ ಸಂಪರ್ಕ ಹೊಂದಿದೆ.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತುಂಬಾ ವಿಶೇಷ ಸ್ಥಾನ ವಚನ ಸಾಹಿತ್ಯಕ್ಕೆ ಇದೆ. ಧರ್ಮ, ನೀತಿ, ತತ್ವ, ಅಧ್ಯಾತ್ಮ, ಸಮಾಜ, ವಿಜ್ಞಾನ, ಮನೋವಿಜ್ಞಾನ, ರಾಜಕೀಯ ಹೀಗೆ ಪರಿಶುದ್ಧ ಜೀವನಕ್ಕೆ ಬೇಕಾದ ಎಲ್ಲ ಸಂಗತಿಗಳೂ ವಚನ ಗಳಲ್ಲಿವೆ. ವೇದ, ಉಪನಿಷತ್ತು, ಭಗವದ್ಗೀತೆ ಮತ್ತಿತರೆ ಧಾರ್ಮಿಕ ಗ್ರಂಥಗಳಲ್ಲಿರುವ ತತ್ವಗಳಿ ಗಿಂತ ಹೆಚ್ಚಿನ ವಿಚಾರಗಳು ಇಲ್ಲಿ ಅಡಕವಾಗಿವೆ ಎಂದರೆ ಅತಿಶಯೋಕ್ತಿಯೇನಲ್ಲ ಏನಲ್ಲ ಎಂದರು.

ಉಪನ್ಯಾಸಕ ಡಾ.ಹೆಚ್.ರಮೇಶ್, `ಕರ್ತವ್ಯ ಪ್ರಜ್ಞೆ’ ಕುರಿತು ಮಾತನಾಡಿ, ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಧರ್ಮ ಜಾಗೃತಿ ಕಾರ್ಯದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಋಷಿ, ಯತಿ ಸಂಸ್ಕೃತಿ ಮುಂದುವರೆದ ಭಾಗವಾಗಿರುವ ಶಿಷ್ಯ ಪರಂಪರೆಯ ಕರ್ತವ್ಯ ಪ್ರಜ್ಞೆ
ಜಾಗೃತಗೊಳಿಸಲು ಕುಲಗು­ರುಗಳ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.

ಸರ್ಕಾರಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿ ಸರ್ಕಾರ ನೀಡುತ್ತಿರುವ ಸಂಬಳಕ್ಕೆ ವಿಧೇಯರಾಗಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಬೇಕು. ಇದಾಗದಿದ್ದರೆ ಮಾನವ ಹಕ್ಕುಗಳ ಉಲ್ಲಂಘನೆಯ ಬಹುದೊಡ್ಡ ಅಪರಾಧವಾಗುತ್ತದೆ. ಮಾನವ ಹಕ್ಕುಗಳನ್ನು ಕಾಪಾಡುವುದರ ಜತೆಗೆ ನೀಡಿರುವ ಕೆಲಸದ ಅವಧಿಯಲ್ಲಿ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ, ಕೆಲಸದ ವೇಗ ತೀವ್ರಗೊಳಿಸಿಕೊಳ್ಳ ಬೇಕೆಂದು  ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂಬ್ಲಿ ದೊಡ್ಡಭರಮಪ್ಪ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಡಿ.ತಿಪ್ಪೇಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತು ಅರಸಿಕೇರಿ ಘಟಕದ ಅಧ್ಯಕ್ಷ ಡಾ.ಎಂ.ಸುರೇಶ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ನಾಗರಾಜ, ಉಪನ್ಯಾಸಕರಾದ ಡಾ.ಎ.ಎಂ.ರಾಜಶೇಖರ್, ಸ್ವರ್ಣ, ಟಿ.ಸುಭಾಷ್, ಅಣ್ಣಪ್ಪ, ನವಾಜ್  ಬಾಷಾ, ಗ್ರಂಥ ಪಾಲಕ ಬಸವಲಿಂಗಪ್ಪ,  ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರೇಣುಕಾ ಪ್ರಸಾದ್ ಕಲ್ಮಠ ಸೇರಿದಂತೆ ಇತರರು ಇದ್ದರು.

error: Content is protected !!