ಹೆಚ್ಚುತ್ತಿರುವ ಬೆನ್ನು ನೋವಿಗೆ ಆಧುನಿಕ ಜೀವನ ಶೈಲಿ ಕಾರಣ

ಹೆಚ್ಚುತ್ತಿರುವ ಬೆನ್ನು ನೋವಿಗೆ ಆಧುನಿಕ ಜೀವನ ಶೈಲಿ ಕಾರಣ

ಭಾವಸಾರ ವಿಷನ್ ಇಂಡಿಯಾ ಮಹಾಸಭೆಯಲ್ಲಿ ಯೋಗ ತಜ್ಞ ರಾಘವೇಂದ್ರ ಗುರೂಜಿ

ದಾವಣಗೆರೆ, ಜು.4- ಹೆಚ್ಚುತ್ತಿರುವ ಬೆನ್ನು ನೋವು ಸಮಸ್ಯೆಗೆ ಇಂದಿನ ಆಧುನಿಕ ಜೀವನ ಶೈಲಿಯ ಮಾರ್ಪಾಡುಗಳೇ ಕಾರಣ ಎಂದು  ಪ್ರಶಸ್ತಿ ಪುರಸ್ಕೃತ ಯೋಗ ತಜ್ಞ ರಾಘವೇಂದ್ರ ಗುರೂಜಿ ಅಭಿಪ್ರಾಯಪಟ್ಟರು.

ನಗರದ ಜೆ.ಪಿ. ಸಭಾಂಗಣದಲ್ಲಿ ಭಾವಸಾರ ವಿಷನ್ ಇಂಡಿಯಾ ವಲಯ-102  ವತಿಯಿಂದ ಆಯೋಜಿಸಿದ್ದ ಮಾಸಿಕ ಮಹಾ ಸಭೆಯಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿ  `ಕಾಡುವ ಬೆನ್ನು ನೋವು ಇದಕ್ಕಿದೆ ಯೋಗ ಚಿಕಿತ್ಸೆಯಲ್ಲಿ ಪರಿಹಾರ’  ಎಂಬ ವಿಷಯದ ಮೇಲೆ ಅವರು ಉಪನ್ಯಾಸ ನೀಡಿದರು.

ಇಂದು ಜನಸಾಮಾನ್ಯರು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಶೇ.60 ರಿಂದ 80ರಷ್ಟು ಜನ   ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ. 

ಈ ಹಿಂದೆ ಅವಿಭಕ್ತ ಕುಟುಂಬದ ಪರಂಪರೆ ಇದ್ದು, ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕುಟುಂಬದ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಸಾಮರಸ್ಯದಿಂದ ಸಹಬಾಳ್ವೆ ನಡೆಸುತ್ತಿದ್ದರು. ಆದರೆ, ಇಂದಿನ ಆಧುನಿಕ ಜೀವನ ಶೈಲಿಯ ಭರಾಟೆಯಲ್ಲಿ ಪೂರ್ವಜರು ಹಾಕಿಕೊಟ್ಟ ದಾರಿಯನ್ನು ಮರೆತು ಆಧುನಿಕ ಜೀವನ ಶೈಲಿಗೆ ಮಾರುಹೋಗಿ ನಮ್ಮ ಶರೀರಕ್ಕೆ ಸರಿಯಾದ ವ್ಯಾಯಾಮ ಕೊಡದೇ ಸುಖ ಭೋಗಗಳಿಗೆ ದಾಸರಾಗಿರುವ ಕಾರಣ ನಮ್ಮ ದೇಹದ ಮುಖ್ಯ ಅಂಗವಾದ ಬೆನ್ನು ನೋವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಬೆನ್ನು ನೋವು ಬಂದಾಗ ಸಾಮಾನ್ಯವಾಗಿ ನೋವಿನ ಮಾತ್ರೆಗಳನ್ನು ನುಂಗಿ, ಚಿಕಿತ್ಸೆಯನ್ನು ಪಡೆಯದೇ ಮುಂದೂಡುವುದು ಅತ್ಯಂತ ಅಪಾಯಕಾರಿಯಾಗಿದ್ದು, ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆಯನ್ನು ಪಡೆದಲ್ಲಿ ಜೀವನ ಪರ್ಯಂತ ಬೆನ್ನಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.

ಬೆನ್ನು ನೋವಿನ ನಿವಾರಣೆಗಾಗಿ ದಿನಚರಿಯಲ್ಲಿ ಅನುಸರಿಸುವ ಸರಳವಾದ ವಿಧಾನಗಳು ನಿಂತುಕೊಳ್ಳುವ, ಕುಳಿತುಕೊಳ್ಳುವ, ಮಲಗಿಕೊಳ್ಳುವ ಸರಿಯಾದ ಸ್ಥಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ  ಗುರೂಜಿಯವರು ತೋರಿಸಿಕೊಟ್ಟರು. ಯೋಗ ಚಿಕಿತ್ಸೆಯಲ್ಲಿ ಉಪಯೋಗಿಸುವ ಹಲವು ವಿಧಾನಗಳನ್ನು ಪರದೆಯ ಮೇಲೆ ಪರಿಚಯಿಸಿ ಗುಣಮುಖರಾದ ಸಾಧಕರ ಅನುಭವವನ್ನು ಪರಿಚಯಿಸಿದರು. ಪ್ರಾತ್ಯಕ್ಷಿಕೆಯಲ್ಲಿ ಮಹಾಂತೇಶ್, ಶ್ರೀಮತಿ ಅಶ್ವಿನಿ ವದೋನಿ, ಯೋಗಿಕ್ ಸೈನ್ಸ್ ವಿದ್ಯಾರ್ಥಿ ರಾಹುಲ್ ವಿ.ಕೆ. ಕೆಲವು ಚಿಕಿತ್ಸೆಯ ಭಂಗಿಯ ಆಸನಗಳನ್ನು ತೋರಿಸಿಕೊಟ್ಟರು.

ಓಂಕಾರ್  ಪ್ರಾರ್ಥಿಸಿದರು. ನಗರದ ಭಾವಸಾರ್ ಮಿಷನ್ ಇಂಡಿಯಾ ವಲಯ  ಅಧ್ಯಕ್ಷರಾದ ಶ್ರೀಮತಿ ಸರಳ ಆಮ್ಟೆ   ಸ್ವಾಗತಿಸಿದರು.     ಗುರೂಜಿ ಕಿರು ಪರಿಚಯ ವನ್ನು ಸಂದೀಪ್ ವಾದೋನಿ ಮಾಡಿಕೊಟ್ಟರು.  ಕಾರ್ಯದರ್ಶಿ ರಮೇಶ್‍ಬಾಬು ಗುಜ್ಜರ್ ವಂದಿಸಿದರು. ಅನಿಲ್‍ಕುಮಾರ್ ಮಾಳದ್‍ಕರ್  ನಿರೂಪಿಸಿದರು.  

error: Content is protected !!