ಗುಂಪುಗಾರಿಕೆ-ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಉಚ್ಛಾಟನೆಗೆ ವಿಜಯೇಂದ್ರ ಮುಂದಾಗಲಿ

ಗುಂಪುಗಾರಿಕೆ-ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಉಚ್ಛಾಟನೆಗೆ ವಿಜಯೇಂದ್ರ ಮುಂದಾಗಲಿ

ಹೊನ್ನಾಳಿ, ಜು.3- ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎ.ಬಿ.ಹನುಮಂತಪ್ಪ ಬಣದಿಂದ ಲೋಕಸಭಾ ಚುನಾವಣಾ ಸೋಲಿನ ಆತ್ಮಾವಲೋಕನದ ಬಗ್ಗೆ ಸಭೆ ನಡೆಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎ.ಬಿ.ಹನುಮಂತಪ್ಪ ಮಾತನಾಡಿ, ಬಿಜೆಪಿ  ಕಾರ್ಯಕರ್ತರು ಪಕ್ಷದ ಪರವಾಗಿ ನಿಷ್ಠೆಯಿಂದ ಇದ್ದು, ಕೆಲ ಪ್ರಮುಖ ಮುಖಂಡರ ಗೊಂದಲದ ಹೇಳಿಕೆಗಳಿಂದಾಗಿ ದ್ವಂದ್ವ ಕುತಂತ್ರಗಳಿಂದಾಗಿ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಸೋಲು  ಅನುಭವಿಸಬೇಕಾಯಿತು ಎಂದು ಪರೋಕ್ಷವಾಗಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ಬೆಂಬಲಿಗರ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲೆಯಲ್ಲಿ ಪಕ್ಷವು ಅಸ್ತಿತ್ವದಲ್ಲಿಲ್ಲದ ಕಾಲದಲ್ಲಿ ಜಿ.ಮಲ್ಲಿಕಾರ್ಜುನಪ್ಪ ಅವರು ತುಂಬಾ
ಶ್ರಮವಹಿಸಿ ಪಕ್ಷವನ್ನು ಸಂಘಟಿಸಿ, ಸುದೀರ್ಘಾವಧಿಯವರೆಗೆ ಪಕ್ಷವು ಅಧಿಕಾರ ಹಿಡಿಯಲು ಕಾರಣರಾಗಿದ್ದರು. ಅಂತಹವರ ಕುಟುಂಬದವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಇವರು ಬೇರೆ ಜಿಲ್ಲೆಯವರು ದಾವಣಗೆರೆ ಜಿಲ್ಲೆಯವರಿಗೆ ಲೋಕಸಭಾ ಟಿಕೆಟ್ ನೀಡುವಂತೆ ಬಣ ರಾಜಕೀಯ ಮಾಡಿದ್ದಲ್ಲದೇ, ಜಿ.ಎಂ.ಸಿದ್ದೇಶ್ವರ ಅವರ ಬಗ್ಗೆ ಇಲ್ಲ-ಸಲ್ಲದ ಸುಳ್ಳು ಆರೋಪಗಳನ್ನು ಮಾಡಿದ್ದು, ಪಕ್ಷದ ಅಭ್ಯರ್ಥಿಯು ಹಿನ್ನಡೆ ಅನುಭವಿಸುವಂತಾಯಿತು ಎಂದು ಮಾರ್ಮಿಕವಾಗಿ ನುಡಿದರು.

ಶೀಘ್ರದಲ್ಲಿಯೇ ಜಿ.ಪಂ ಮತ್ತು ತಾ.ಪಂ ಚುನಾವಣೆಗಳು ಬರಲಿದ್ದು, ಈ ಚುನಾವಣೆಗಳಲ್ಲಿ ಪಕ್ಷವನ್ನು ಸಂಘಟಿಸಿ, ಯಾವುದೇ ಗೊಂದಲಗಳಿಗೆ ಆಸ್ಪದ ಕೊಡದಂತೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ಬೆನಕನಹಳ್ಳಿ ಎ.ಜಿ.ಮಹೇಂದ್ರಗೌಡ ಮಾತನಾಡಿ, ಇದುವರೆಗೂ ಬಿಜೆಪಿಯಿಂದ ಟಿಕೆಟ್ ಪಡೆದು ಅಧಿಕಾರವನ್ನು ಅನುಭವಿಸಿ ಪಕ್ಷವನ್ನು ಹೈಜಾಕ್ ಮಾಡಲು ಯತ್ನಿಸುತ್ತಿರುವ ರೇಣುಕಾಚಾರ್ಯ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಪಕ್ಷದಿಂದ ಎಲ್ಲಾ ಸ್ಥಾನ-ಮಾನಗಳನ್ನು ಅನುಭವಿಸಿರುವ ರೇಣುಕಾಚಾರ್ಯ ಅವರು ತಾಲ್ಲೂಕಿನಲ್ಲಿ ಪಕ್ಷದಲ್ಲಿ ಒಡಕು ಮೂಡುವಂತೆ ಮಾಡಿದ್ದಲ್ಲದೇ ಜಿಲ್ಲಾದ್ಯಂತ ತಾವು ಹೇಳಿದ್ದೇ ನಡೆಯುತ್ತೆ ಎಂಬ ಸರ್ವಾಧಿಕಾರಿ  ಧೋರಣೆ ತೋರುತ್ತಿದ್ದು, ಇದಕ್ಕೆ ಕಡಿವಾಣ  ಹಾಕುವಂತೆ   ವರಿಷ್ಠರನ್ನು ಆಗ್ರಹಿಸಿದರು.

ಬರ ಅಧ್ಯಯನಕ್ಕೆ ಬಾರದವರು ಅಭಿನಂದನೆಗೆ: ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ತಂಡದವರು ಅವಳಿ ತಾಲ್ಲೂಕುಗಳಿಗೆ ಬರ ಅಧ್ಯಯನಕ್ಕೆಂದು ಇಲ್ಲಿಗೆ ಬಂದಾಗ ಸಹಕರಿಸದೇ ಇದ್ದವರು ಇದೀಗ ಅದೇ ಕಾಗೇರಿಯವರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ಮಾಜಿ ಶಾಸಕರು ಅಭಿನಂದನೆ ಸಲ್ಲಿಸಲು ಹೋಗಿದ್ದು ಎಷ್ಟರ ಮಟ್ಟಿಗೆ ಸರಿಯೆಂದು  ವ್ಯಂಗ್ಯವಾಡಿದರು.

ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಾಮಾನ್ಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಗುಂಪುಗಾರಿಕೆ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರುವವರ ಜೊತೆಗೆ ಸಲುಗೆ ಬೆಳೆಸುತ್ತಿರುವುದು ಮುಂದಿನ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿ.ಪಂ ಮಾಜಿ ಸದಸ್ಯ ಎಂ.ಆರ್.ಮಹೇಶ್ ಮಾತನಾಡಿ, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಶಕ್ತಿಯನ್ನು ತಾಲ್ಲೂಕು ಬಿಜೆಪಿ ಪಕ್ಷ  ಕಳೆದುಕೊಂಡಿದ್ದು, ನಿದ್ರಾಹೀನ ಸ್ಥಿತಿಯಲ್ಲಿರುವ ಪಕ್ಷವನ್ನು ಎಚ್ಚರ ಮಾಡಿ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ಮಾಡಲು ಸಜ್ಜಾಗಬೇಕೆಂದು ಅವರು ಕರೆ ನೀಡಿದರು.

ಬಿಜೆಪಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆಯಾಗಬಾರದು ಎಂಬ ಉದ್ದೇಶದಿಂದ ಮಾಜಿ ಶಾಸಕರು ಮತ್ತು ಅವರ ಬೆಂಬಲಿಗರು ಏನೇ ತೊಂದರೆ ಕೊಟ್ಟರೂ ಸಹ ಎಲ್ಲವನ್ನೂ ಸಹಿಸಿಕೊಂಡು ಚುನಾವಣೆ ಮಾಡಿದರೂ ನಿಷ್ಠೆಯಿಂದ ಚುನಾವಣೆ ಮಾಡದೇ ಕುತಂತ್ರದಿಂದ ಚುನಾವಣೆ ಮಾಡಿದ್ದು, ನೋವು ತಂದಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಕೆ.ವಿ.ಚನ್ನಪ್ಪ ಮಾತನಾಡಿ, ಪಕ್ಷದ ಕಾರ್ಯಕರ್ತರು ನಿಷ್ಠೆಯಿಂದ ಚುನಾವಣೆ ಎದುರಿಸಿದರೂ ಮಾಜಿ ಶಾಸಕರ ಬಣದಿಂದ ಹಳ್ಳಿಗಳಲ್ಲಿ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಮುಜುಗರ ಅನುಭವಿಸುವಂತಾಯ್ತು ಎಂದು ಬೇಸರ ವ್ಯಕ್ತಪಡಿಸಿದರು.

ಗಾಯತ್ರಿ ಸಿದ್ದೇಶ್ವರ ಅವರು ಚುನಾವಣೆ ಸಂದರ್ಭದಲ್ಲಿ ಹೊನ್ನಾಳಿಗೆ ಬಂದಾಗ ಎಂ.ಪಿ.ಆರ್. ಅವರು ತಮ್ಮ ಬಣದ ವ್ಯಕ್ತಿಯೊಬ್ಬನಿಂದ ಮುಜುಗರವುಂಟಾಗುವ ಪ್ರಶ್ನೆ ಮಾಡಿಸಿದ್ದು, ಎಂ.ಪಿ.ಆರ್. ಕಾಂಗ್ರೆಸ್ ಪಕ್ಷ ಸೇರುತ್ತಾರೆಂಬ ವದಂತಿಗಳ ಬಗ್ಗೆ, ಜಿ.ಎಂ.ಸಿದ್ದೇಶ್ವರ ಅವರ ಅಭಿಮಾನಿಗಳು ದಾವಣಗೆರೆಯಲ್ಲಿ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆಯಲ್ಲಿನ ವಿಷಯಗಳನ್ನು ಸಭೆಯ ಗಮನಕ್ಕೆ ತಂದರಲ್ಲದೇ, ತಾಲ್ಲೂಕು ಬಿಜೆಪಿ ನೂತನ ಅಧ್ಯಕ್ಷರ ಆಯ್ಕೆಯ ಬಗ್ಗೆ ಪಕ್ಷದ ಕಾರ್ಯಕರ್ತರಿಂದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಕೆ.ರವಿ, ಉಪಾಧ್ಯಕ್ಷರುಗಳಾದ ಎಂ.ಯು.ನಟರಾಜ್, ಸಾಸ್ವೆಹಳ್ಳಿ ನರಸಿಂಹಪ್ಪ, ಮುಖಂಡರುಗಳಾದ ಯಕ್ಕನಹಳ್ಳಿ ಟಿ.ಎಸ್.ಜಗದೀಶ್, ನೆಲಹೊನ್ನೆ ದೇವರಾಜ್, ಕುಂದೂರು ನಾಗರಾಜ್, ಚೀಲೂರು ಲೋಕೇಶ್, ಅಜಯ್ ರೆಡ್ಡಿ, ಬಿಂಬ ಮಂಜುನಾಥ್, ಮಾಸಡಿ ಸಿದ್ದೇಶ್, ಚನ್ನೇಶ್ ಸೇರಿದಂತೆ ಅವಳಿ ತಾಲ್ಲೂಕುಗಳ ಮುಖಂಡರುಗಳು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

error: Content is protected !!