ದಾವಣಗೆರೆ, ಜು. 3- ನಗರದ ಕುವೆಂಪು ಕನ್ನಡ ಭವನದಲ್ಲಿ ಸ್ವರತಂತ್ರ ಗಾಯಕರ ತಂಡದ ವತಿಯಿಂದ `ನೂರೊಂದು ನೆನಪು ಹಾಡಾಗಿ ಬಂತು…….’ ಶೀರ್ಷಿಕೆಯಡಿ ಏರ್ಪಡಿಸಿದ್ದ `ಸಿನಿಹನಿ’ ಕಾರ್ಯಕ್ರಮ ಕೇಳುಗರ ಮನಗೆದ್ದಿತು.
ಸ್ವರತಂತ್ರ ಗಾಯಕರ ತಂಡ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ಗೀತೆಗಳ ಗಾಯನ ಪ್ರಸ್ತುತಿ ಪಡಿಸಿದ್ದು ವಿಶೇಷವಾಗಿತ್ತು. ಉದಯೋನ್ಮುಖ ಗಾಯಕರು ಸುಮಧುರ ಗೀತೆಗಳ ಮೂಲಕ ಪ್ರೇಕ್ಷಕರ ಮನ ರಂಜಿಸಿದರು.
ಸಂಧ್ಯಾ ಗಿರೀಶ್, ವಿದ್ಯಾ ವಿಕ್ರಂ, ಡಾ. ರಶ್ಮಿ ಸಂಜಯ್, ಲಲಿತ ಕಿರಣ್, ಅರ್ಚನಾ ರಾಜೀವ್, ದೀಪಶ್ರೀ ದಿವಾಕರ್, ಡಾ. ದೀಪಕ್ ರೋಹಿಡೇಕರ್, ಕೆ.ಎಸ್. ದೀಪಕ್, ರಘು ನಂದನ್, ಲೋಹಿತ್ ಚಿನಗುಡಿ ಇವರ ಸಿರಿಕಂಠದಿಂದ ಮೂಡಿಬಂದ ಗೀತೆಗಳಿಗೆ ಸಿನಿಪ್ರಿಯರು ತಲೆದೂಗಿದರು.
ಆರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಚಂದ್ರಪ್ಪ, ಶ್ರೀಮತಿ ಜಯಂತಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸ್ವರತಂತ್ರ ತಂಡದ ಮುಖ್ಯಸ್ಥರಾದ ಡಾ. ದೀಪಕ್ ಅವರನ್ನು ಗೌರವಿಸಲಾಯಿತು.