ಹಾಲಿನ ದರ ಏರಿಕೆ: ಬಿಜೆಪಿ ಪ್ರತಿಭಟನೆ

ಹಾಲಿನ ದರ ಏರಿಕೆ: ಬಿಜೆಪಿ ಪ್ರತಿಭಟನೆ

ದಾವಣಗೆರೆ, ಜು.1- ನಂದಿನಿ ಹಾಲಿನ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಹಾಲಿನ ದರ ಕಡಿಮೆ ಮಾಡುವಂತೆ ಮನವಿ ಅರ್ಪಿಸಿದರು.

ರಾಜ್ಯದಲ್ಲಿ ಪ್ರತಿ ದಿನ ಹಾಲಿನ ಉತ್ಪಾದನೆ ಒಂದು ಕೋಟಿ ಲೀಟರ್ ಸನಿಹದಲ್ಲಿದೆ ಎಂಬ ಕಾರಣದಿಂದ ಹಾಲಿನ ದರ ಹೆಚ್ಚಳ ಮಾಡಿರುವುದು ಹಾಸ್ಯಾಸ್ಪದ. ಯಾವುದೇ ಉತ್ಪನ್ನಗಳ ಅಭಾವವಾ ದಾಗ ದರ ಹೆಚ್ಚಳ ಸಾಮಾನ್ಯ. ಆದರೆ ಉತ್ಪನ್ನ ಅಧಿಕವಾಗಿದೆ ಎಂದು ದರ ಹೆಚ್ಚಳ ಮಾಡುವುದು ಹುಚ್ಚು ಸರ್ಕಾರದ ಪರಮಾವಧಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹಾಲು ಪೋಷಕಾಂಶಗಳ ಆಗರವಾಗಿದ್ದು, ಇದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬೇಕಾಬಿಟ್ಟಿ ನಿರ್ವಹಣೆ ಮಾಡುತ್ತಿದೆ. ಹಾಲು ಉತ್ಪಾದನೆ ಹೆಚ್ಚಾಗಿರುವುದರಿಂದ ಒಂದು ಲೀಟರ್ ಪ್ಯಾಕೆಟ್‌ನಲ್ಲಿ 100 ಎಂ.ಎಲ್. ಹೆಚ್ಚಿಸಿ, ಹಳೇ ದರಕ್ಕೆ ಮಾರಾಟ ಮಾಡಿದ್ದರೆ ಕ್ಷೀರ ಭಾಗ್ಯ ಎಂದು ಜನಪರವಾಗಿರುತ್ತಿತ್ತು. ಆದರೆ ಹಾಲಿನ ದರ ಹೆಚ್ಚಳ ಮಾಡಿರುವುದು ಜನ ವಿರೋಧಿ ಕ್ರಮ ಎಂದು ಕಿಡಿಕಾರಿದರು.

ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ರೈತ ಶಕ್ತಿ ಯೋಜನೆಯನ್ನು ಜಾರಿ ಮಾಡಿ, ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತ್ತಿತ್ತು. ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ಅಲ್ಲದೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿ ಯಾಂತ್ರಿ ಕೃತ ಕೃಷಿ ಚಟುವಟಿಕೆಗಳನ್ನು ದುಬಾರಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ತಗಲುವ ವೆಚ್ಚವನ್ನು ರೈತರೇ ಭರಿಸ ಬೇಕೆಂದು ರಾಜ್ಯದ ಕಾಂಗ್ರೆಸ್ ಸರ್ಕಾರ ಆದೇಶಿಸಿದೆ. ಇದು ರೈತರನ್ನು ಬಹಳಷ್ಟು ಕಂಗೆಡಿಸಿದೆ. ಪಂಪ್‌ಸೆಟ್‌ಗಳಿಗೆ ಬಿಜೆಪಿ ಸರ್ಕಾರ ಆಡಳಿತ ನಡೆಸಿದ ಸಂದರ್ಭದಲ್ಲಿ ಕೇವಲ 25 ಸಾವಿರ ರೂ.ಗಳಲ್ಲಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಸರ್ಕಾರದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ರೈತರು ಮೂರರಿಂದ ನಾಲ್ಕು ಲಕ್ಷ ರೂ. ಗಳನ್ನು ಖರ್ಚು ಮಾಡುವಂತಾಗಿದೆ. ಇದು ರೈತ ವಿರೋಧಿ ನೀತಿಯಾಗಿದೆ ಎಂದರು.

ಭೂ ಸಿರಿ, ವಿದ್ಯಾನಿಧಿ ಯೋಜನೆಗಳನ್ನು ನಿಲ್ಲಿಸಲಾಗಿದೆ. ದುಪ್ಪಟ್ಟು ಹಣವನ್ನು ಟ್ರಾನ್ಸ್‌ಫಾರ್ಮರ್‌ಗಳಿಗೆ ನೀಡುವಂತಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಮುದ್ರಾಂಕ ದರ ಏರಿಕೆ, ಆಸ್ತಿ ನೋಂದಣಿ ಶೇ. 30 ರಷ್ಟು ಹೆಚ್ಚಾಗಿದೆ. ಕ್ಷೀರ ಸಮೃದ್ಧಿ ಬ್ಯಾಂಕ್ ಯಾಕೆ ಪ್ರಾರಂಭಿಸಿಲ್ಲ. 824 ರೈತರ ಆತ್ಮಹತ್ಯೆಗೆ ಕಾರಣಗಳೇನು ? ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಹರಿಹರ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಮುಖಂಡರಾದ ಬಿ.ಎಂ. ಸತೀಶ್ ಕೊಳೇನಹಳ್ಳಿ, ಚಂದ್ರಶೇಖರ್ ಪೂಜಾರ್, ಶಿವನಗೌಡ ಪಾಟೀಲ್, ಅತಿಥ್‌ ಅಂಬರ್‌ಕರ್, ಶ್ರೀನಿವಾಸ ದಾಸಕರಿಯಪ್ಪ, ರಮೇಶ್ ನಾಯ್ಕ, ಅಣಜಿ ಗುಡ್ಡೇಶ್, ಶಂಕರಗೌಡ ಬಿರಾದಾರ್, ಕಬ್ಬೂರು ಶಿವಕುಮಾರ್, ಶಿವಪ್ರಕಾಶ್, ಮಳಲಕೆರೆ ಸದಾನಂದ್, ಕರಿಲಕ್ಕೇನಹಳ್ಳಿ ಓಂಕಾರಪ್ಪ, ಕುರ್ಕಿ ರೇವಣಸಿದ್ಧಪ್ಪ, ಬಲ್ಲೂರು ಬಸವರಾಜ್, ಶಿರಮಗೊಂಡನಹಳ್ಳಿ ಮಂಜುನಾಥ್, ವಾಟರ್ ಮಂಜುನಾಥ್, ಚೇತನಕುಮಾರ್, ಸವಿತಾ ರವಿಕುಮಾರ್, ಹೆಬ್ಬಾಳು ಮಹೇಂದ್ರ, ತ್ಯಾವಣಗಿ ಕೃಷ್ಣಕುಮಾರ್, ಹನುಮಂತನಾಯ್ಕ, ತರಕಾರಿ ಶಿವು, ಗೋವಿಂದಸ್ವಾಮಿ, ಕಿಶೋರಕುಮಾರ್, ಟಿಂಕರ್ ಮಂಜಣ್ಣ,  ಪುಷ್ಪಾ ವಾಲಿ, ನಸೀರ್ ಅಹಮದ್ ಮತ್ತಿತರರು ಭಾಗವಹಿಸಿದ್ದರು. 

error: Content is protected !!