ಶಿಕ್ಷಣದಿಂದ ಮಕ್ಕಳ ಉಜ್ವಲ ಭವಿಷ್ಯ ಸಾಧ್ಯ

ಶಿಕ್ಷಣದಿಂದ ಮಕ್ಕಳ ಉಜ್ವಲ ಭವಿಷ್ಯ ಸಾಧ್ಯ

ದಾವಣಗೆರೆ, ಜು.1- ಮಕ್ಕಳು ಉತ್ತಮ ಸಂಸ್ಕಾರದ ಜತೆಗೆ ಉಜ್ವಲ ಭವಿಷ್ಯ ಹೊಂದಲು ಹಾಗೂ ದೇಶವು ಅಭಿವೃದ್ಧಿಯಾಗಲು ಶಿಕ್ಷಣದಿಂದಲೇ ಸಾಧ್ಯ ಎಂದು ವಿರಕ್ತಮಠದ ಬಸವಪ್ರಭು ಶ್ರೀಗಳು ಹೇಳಿದರು.

ನಗರದ ಮೌಲಾನ ಆಜಾದ್ ಸಾಂಸ್ಕೃತಿಕ ಸಂಸ್ಥೆಯಲ್ಲಿ ಬುಧವಾರ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ ಹಾಗೂ ಇತರೆ ಶಿಕ್ಷಣ ಸಾಮಗ್ರಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಓದಿ ಉತ್ತಮ ಸ್ಥಾನ ಹೊಂದಿದ ನಂತರ ತಂದೆ-ತಾಯಿಯರನ್ನು ವೃದ್ದಾಶ್ರಮಕ್ಕೆ ಕಳುಹಿಸದೇ ನಿಮ್ಮ ಜೊತೆಯಲ್ಲಿ ಇಟ್ಟುಕೊಂಡು ತಂದೆ-ತಾಯಿ ಸೇವೆ ಮಾಡುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು.

ಈ ಸಂಸ್ಥೆಯ ನಸೀರ್ ಅಹಮದ್ ಅವರು ಸುಮಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿದ್ದು, ಓದುವ ಮಕ್ಕಳಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ಮಾಡುತ್ತಾ ಶಿಕ್ಷಣ ಪ್ರೇಮಿಯಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಇವರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಪ್ರಶಸ್ತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಮೌಲಾನ ಆಜಾದ್ ಸಂಸ್ಥೆಯ ಅಧ್ಯಕ್ಷ ಡಾ.ಸಿ.ಆ‌ರ್. ನಸೀರ್ ಅಹಮದ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ್ ಕಡ್ಲೇಬಾಳು, ಜಾಮಿಯಾ ಮಸೀದಿಯ ಪದಾಧಿಕಾರಿಗಳಾದ ಅಲ್ಲಾವಲಿ ಭಕ್ಷೀಖಾನ್‌, ರೋಷನ್, ವಿರಕ್ತಮಠ ಶಾಲೆಯ ಮುಖ್ಯಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!