ಹಾಲಿನ ದರ ಹೆಚ್ಚಳ ವಿರೋಧಿಸಿ ನಗರದಲ್ಲಿ ಇಂದು ಬಿಜೆಪಿ ಪ್ರತಿಭಟನೆ

ದಾವಣಗೆರೆ, ಜೂ. 30- ಹಾಲಿನ ದರ ಹೆಚ್ಚಳ ವಿರೋಧಿಸಿ ನಾಳೆ ದಿನಾಂಕ 1 ರ ಸೋಮವಾರ ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಹಾಗೂ ಜಿಲ್ಲಾ ವಕ್ತಾರ ಬಿ.ಎಂ. ಸತೀಶ್ ಕೊಳೇನಹಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ದಿನನಿತ್ಯ ಹಾಲಿನ ಉತ್ಪಾದನೆ ಒಂದು ಕೋಟಿ ಲೀಟರ್ ಸನಿಹದಲ್ಲಿದೆ ಎಂಬ ಕಾರಣದಿಂದ ಹಾಲಿನ ದರ ಹೆಚ್ಚಳ ಮಾಡಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಹಾಲು ಉತ್ಪಾದನೆ ಹೆಚ್ಚಾಗಿರುವುದರಿಂದ ಒಂದು ಲೀಟರ್ ಪ್ಯಾಕೇಟ್‌ ನಲ್ಲಿ 100 ಮಿ.ಲೀ. ಹೆಚ್ಚಿಸಿ, ಹಳೇ ದರಕ್ಕೆ ಮಾರಾಟ ಮಾಡಿದ್ದರೆ ಕ್ಷೀರಭಾಗ್ಯ ಎಂದು ಜನ ಕೊಂಡಾಡುತ್ತಿದ್ದರು. ಆದರೆ ಹಾಲಿನ ದರ ಹೆಚ್ಚಳ ಮಾಡಿರುವುದು ಜನ ವಿರೋಧಿಯಾಗಿದೆ ಎಂದು ಕಿಡಿ ಕಾರಿದರು.

ರಾಜ್ಯದಲ್ಲಿನ ಒಟ್ಟು 15 ಹಾಲು ಒಕ್ಕೂಟಗಳಲ್ಲಿ 798691 ಹಾಲು ಉತ್ಪಾದಕ ರೈತರಿದ್ದಾರೆ. ಇವರಿಗೆ ಆಗಸ್ಟ್ 2023 ರಿಂದ ಮಾರ್ಚ್ 2024 ರವರೆಗೆ ಒಟ್ಟು 8 ತಿಂಗಳ 1083 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಇದೆ. ಆದರೆ ಏಪ್ರಿಲ್ ತಿಂಗಳ (2024) ಪ್ರೋತ್ಸಾಹ ಧನ 109 ಕೋಟಿ ರೂ. ಬಿಡುಗಡೆ ಮಾಡಿದೆ. 2023-24 ನೇ ಸಾಲಿನ ಪ್ರೋತ್ಸಾಹ ಧನ ಬಿಡುಗಡೆ ನೆನೆಗುದಿಗೆ  ಬಿದ್ದಿದೆ. ಇದರಿಂದ ಹಾಲು ಉತ್ಪಾದಕರು ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ಬಾತಿ ಶಿವಕುಮಾರ್, ಶಿರಮಗೊಂಡನಹಳ್ಳಿ ಮಂಜುನಾಥ್, ಈಶ್ವರಪ್ಪ, ಮಂಜುನಾಥ ಉಪಸ್ಥಿತರಿದ್ದರು.

error: Content is protected !!