ಒತ್ತಡಕ್ಕೆ ಮಣಿದು ತಪ್ಪು ಮಾಡದಿರಿ

ಒತ್ತಡಕ್ಕೆ ಮಣಿದು ತಪ್ಪು ಮಾಡದಿರಿ

ಯಲವಟ್ಟಿಯಲ್ಲಿ ಜನಸ್ಪಂದನದಲ್ಲಿ ಅಧಿಕಾರಿಗಳಿಗೆ ಶಾಸಕ ಹರೀಶ್‌ ಎಚ್ಚರಿಕೆ

ಬೇಜವಾಬ್ದಾರಿ ಸರಿಪಡಿಸಿಕೊಳದಿದ್ದರೆ ಹಕ್ಕುಚ್ಯುತಿ ಸಮಿತಿಗೆ ದೂರು

ಮಲೇಬೆನ್ನೂರು, ಜೂ. 30- ಅಧಿಕಾರಿಗಳು ಬೇರೆಯವರ ಒತ್ತಡಕ್ಕೆ ಮಣಿದು ತಪ್ಪು ಮಾಡಿದರೆ ಮುಂದೆ ನಿಮ್ಮನ್ನು ಉಳಿಸಲು ಯಾರೂ ಬರಲ್ಲ. ತಪ್ಪು ಮಾಡಿದರೆ ನನ್ನನ್ನೂ ಸೇರಿ ಯಾರಿಗೂ ಉಳಿಗಾಲ ಇಲ್ಲ ಎಂದು ಶಾಸಕ ಬಿ.ಪಿ. ಹರೀಶ್ ಅಧಿಕಾರಿಗಳನ್ನು ಎಚ್ಚರಿಸಿದರು.

ಯಲವಟ್ಟಿ ಗ್ರಾಮದ ಶ್ರೀ ಗುರು ಸಿದ್ಧಾಶ್ರಮದಲ್ಲಿ ಹರಿಹರ ತಾಲ್ಲೂಕು ಆಡಳಿತದಿಂದ ನಿನ್ನೆ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಮುಖಂಡರು ಮತ್ತು ಸಿನಿಮಾ ನಟರು ಅನುಭವಿಸುತ್ತಿರುವ ಶಿಕ್ಷೆಯನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಚಿಕ್ಕಬಿದರಿ ಬಳಿ ಜಿಲ್ಲೆಯ ಗಡಿಭಾಗದಲ್ಲಿ ಹಳ್ಳ-ಕೊಳ್ಳಗಳನ್ನು ಕಬಳಿಸುತ್ತಿರುವುದನ್ನು ಸಂಬಂಧಪಟ್ಟ ಅಧಿಕಾರಿ ಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ಮಾಡುತ್ತಿದ್ದೀರಿ. ಇದು ಎಂತಹ ಅಪರಾಧವೆಂದು ನಿಮಗೆ ಬಿಸಿ ಮುಟ್ಟಿಸುತ್ತೇನೆ. ನನಗೇ ಈ ರೀತಿ ಮಾಡುವ ಅಧಿಕಾರಿಗಳು ಸಾಮಾನ್ಯ ಜನರನ್ನು ಯಾವ ರೀತಿ ನಡೆಸಿಕೊಳ್ಳಬಹುದೆಂದು ಊಹಿಸಿಕೊಂಡರೆ ತುಂಬಾ ಬೇಸರವಾಗುತ್ತಿದೆ. ಅಧಿಕಾರಿಗಳು ತಮ್ಮ ಬೇಜವಾಬ್ದಾರಿತನವನ್ನು ಸರಿಪಡಿಸಿಕೊಳ್ಳದಿದ್ದರೆ ಹಕ್ಕುಚ್ಯುತಿ ಸಮಿತಿಗೆ ದೂರು ನೀಡುವುದಾಗಿ   ಹರೀಶ್ ಎಚ್ಚರಿಸಿದರು.

ಮಲೇಬೆನ್ನೂರಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆಂದು ಪುರಸಭೆ ಮುಖ್ಯಾಧಿಕಾರಿಗಳು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಶಾಲಾ ಕೊಠಡಿಗಳನ್ನು ಕೆಡವಲು ಮುಂದಾಗಿದ್ದನ್ನು ಪ್ರಸ್ತಾಪಿಸಿದ ಹರೀಶ್ ಅವರು ಸ್ಥಳೀಯ ಅಧಿಕಾರಿಗಳು ದೊಡ್ಡವರ ಮಾತು ಕೇಳಿ ತಪ್ಪು ಮಾಡಿದರೆ ಅದರಿಂದ ನಿಮಗೆ ತೊಂದರೆ ಆದರೆ ನಿಮ್ಮ ಸಹಾಯಕ್ಕೆ ಅವರು ಬರೋದಿಲ್ಲ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಜನಸ್ಪಂದನ ಕಾರ್ಯಕ್ರಮದ ಉದ್ದೇಶವನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಕಾರ್ಯಗತಗೊಳಿಸಬೇಕು.

ರೈತರ ಪಹಣಿ ಕೆಲಸ, ಹೊಲಗಳ ಸರ್ವೆ ಕೆಲಸಗಳಿಗೆ ಆದ್ಯತೆ ಕೊಡಿ. ಉದ್ಯೋಗ ಖಾತ್ರಿ ಮೂಲಕ ಸಿಸಿ ರಸ್ತೆ, ಸಿಸಿ ಚರಂಡಿ ನಿರ್ಮಾಣಕ್ಕೆ ಅವಕಾಶ ಸಿಗಬೇಕು. ಆರೋಗ್ಯ ಇಲಾಖೆಯವರು ಗ್ರಾ.ಪಂ. ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಹೆಚ್ಚಿಸಬೇಕು.

ಸ್ವಚ್ಛತೆ ಇದ್ದರೆ ಸೊಳ್ಳೆ ಇರಲ್ಲ. ಆಗ ಡೆಂಗ್ಯೂ, ಮಲೇರಿಯಾದಂತಹ ರೋಗಗಳನ್ನು ತಡೆಗಟ್ಟಬಹುದೆಂದ ಶಾಸಕ ಹರೀಶ್ ಅವರು, ಈ ಸಭೆಯಲ್ಲಿ ಬಂದಿರುವ ಅರ್ಜಿಗಳನ್ನು ಸಾಧ್ಯವಾದರೆ ಸ್ಥಳದಲ್ಲಿ ಪರಿಹಾರ ನೀಡಿ, ಇಲ್ಲದಿದ್ದರೆ ವಾರದೊಳಗೆ ಬಗೆಹರಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರಾಸ್ತಾವಿಕ ಮಾತನಾಡಿದ ತಹಶೀಲ್ದಾರ್ ಗುರುಬಸವರಾಜ್ ಅವರು, ಜನಸ್ಪಂದನ ಕಾರ್ಯಕ್ರಮದ ಉದ್ದೇಶ ತಿಳಿಸಿ, ಪ್ರತಿ ತಿಂಗಳ ನಾಲ್ಕನೇ ಶನಿವಾರ ಈ ಸಭೆಯನ್ನು ಪ್ರತಿ ಗ್ರಾ.ಪಂ.ನಲ್ಲೂ ಆಚರಿಸಲಾಗುವುದೆಂದರು.

ತಾ.ಪಂ. ಇಓ ರಾಮಕೃಷ್ಣ ಮಾತನಾಡಿ, 6 ತಿಂಗಳಿಂದ 3 ವರ್ಷದವರೆಗಿನ ಮಕ್ಕಳ ಪೋಷಣೆ ಮಾಡುವ ಕೂಸಿನ ಮನೆಯನ್ನು ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಆರಂಭಿಸಿದ್ದೇವೆ. ಬಡವರು, ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗುವ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಟಿ.ಹೆಚ್.ಓ. ಡಾ. ಖಾದರ್, ಬಿಇಓ ಹನುಮಂತಪ್ಪ, ಸಹಾಯಕ ಕೃಷಿ ನಿರ್ದೇಶಕ ಎ. ನಾರನಗೌಡ, ಸಿಪಿಐ ಸುರೇಶ್ ಸಗರಿ, ಸಿಡಿಪಿಓ ಪೂರ್ಣಿಮಾ ಅವರುಗಳು   ತಮ್ಮ ಇಲಾಖೆಗಳ ಮಾಹಿತಿ ನೀಡಿದರು.

ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಯಲ್ಲಮ್ಮ, ಉಪಾಧ್ಯಕ್ಷೆ ಶ್ರೀಮತಿ ರುದ್ರಮ್ಮ, ಗ್ರಾಮದ ಮುಖಂಡರಾದ ಡಿ. ಯೋಮಕೇಶ್ವರಪ್ಪ, ಜಿ. ಆಂಜನೇಯ, ಡಿ.ಹೆಚ್. ಚನ್ನಬಸಪ್ಪ, ಡಿ.ಹೆಚ್. ಮಹೇಂದ್ರಪ್ಪ, ಎ. ರಾಮಚಂದ್ರಪ್ಪ, ಜಯನಾಯ್ಕ, ಬಿ. ಸಿದ್ದೇಶ್, ಪಿಎಸ್ಐ ಪ್ರಭು ಕೆಳಗಿನಮನಿ, ಎಎಸ್ಐ ಮಲ್ಲಿಕಾರ್ಜುನ್, ವೈದ್ಯಾಧಿಕಾರಿ ಡಾ.ಚೇತನ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ, ಭದ್ರಾ ಎಇಇ ಧನಂಜಯ, ಜಿ.ಪಂ. ಎಇಇ ಗಿರೀಶ್, ಎಡಿಎಲ್ಆರ್ ನಾಗಭೂಷಣ್, ವಿಜಯಪ್ರಕಾಶ್, ಪಿಡಿಓ ಮಹೇಶ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿಗಳಾದ ಷರೀಫ್, ಬೋರಯ್ಯ, ಆನಂದತೀರ್ಥ, ಸೌಮ್ಯ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು. ಉಪ ತಹಶೀಲ್ದಾರ್ ಆರ್ಯ ರವಿ ಸ್ವಾಗತಿಸಿದರು.

error: Content is protected !!