ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹ

ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹ

ದಾವಣಗೆರೆ, ಜೂ.28- ಕಟ್ಟಡ ಕಾರ್ಮಿಕರ ಹಕ್ಕೊತ್ತಾಯಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಜಯದೇವ ವೃತ್ತದಲ್ಲಿ ಜಮಾಯಿಸಿದ ಸಮಿತಿಯ ಕಾರ್ಯಕರ್ತರು ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಎಸಿ ಮೂಲಕ ಮುಖ್ಯಮಂತ್ರಿ, ಕಾರ್ಮಿಕ ಮಂತ್ರಿ ಹಾಗೂ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರಿಗೆ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.

ಈ ವೇಳೆ ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ. ಉಮೇಶ್ ಮಾತನಾಡಿ, ಕಾರ್ಮಿಕರಿಗೆ ಅವಶ್ಯಕತೆಯಿಲ್ಲದ ಕಿಟ್ ನೀಡುವುದನ್ನು ತಕ್ಷಣದಲ್ಲೇ ನಿಲ್ಲಿಸಬೇಕು, ರಾಜ್ಯ ಹೈಕೋರ್ಟ್‌ ನೀಡಿರುವ ಕಿಟ್‌ಗಳ ವಿತರಣೆಯ ತಡೆಯಾಜ್ಞೆಯನ್ನು ಸರ್ಕಾರ ಚಾಚೂ ತಪ್ಪದೇ ಪಾಲಿಸಬೇಕೆಂದು ಆಗ್ರಹಿಸಿದರು.

ಕಾರ್ಮಿಕರ ಆರೋಗ್ಯ ತಪಾಸಣೆಯ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕೊಟ್ಟಿರುವ ಗುತ್ತಿಗೆ ರದ್ದುಪಡಿಸಿ ಕಟ್ಟಡ ಕಾರ್ಮಿಕರಿಗೆ ಬಿಬಿಎಂಪಿ ಮಾದರಿಯಲ್ಲಿ ಇಎಸ್ಐ ಜಾರಿ ಮಾಡಬೇಕೆಂದು ಒತ್ತಾಯಿಸಿದರು.

ಮೊದಲು ಇದ್ದ ಶೈಕ್ಷಣಿಕ ಧನ ಸಹಾಯ ಮುಂದುವರೆಸಬೇಕು. ಹೈಕೋರ್ಟ್‌ ಆದೇಶದಂತೆ ಬಾಕಿ ಇರುವ ಎಲ್ಲಾ ವಿದ್ಯಾರ್ಥಿಗಳಿಗೆ ಧನ ಸಹಾಯ ಬಿಡುಗಡೆ ಮಾಡಬೇಕು ಮತ್ತು ಶೈಕ್ಷಣಿಕ ಧನ ಸಹಾಯ ಅರ್ಜಿಯನ್ನು ಕಲ್ಯಾಣ ಮಂಡಳಿಯ ವೆಬ್ ಸೈಟ್ ನಲ್ಲಿಯೇ ಅರ್ಜಿ ಹಾಕುವಂತೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ನಕಲಿ ಕಾರ್ಮಿಕರ ಹೆಸರಿನಲ್ಲಿ ನೈಜ ಕಾರ್ಮಿ ಕರ ಕಾರ್ಡ್‌ಗಳನ್ನು ತಿರಸ್ಕರಿಸುವುದನ್ನು ನಿಲ್ಲಿಸಿ ಬಾಕಿ ಇರುವ ಧನ ಸಹಾಯ ಅರ್ಜಿಗಳನ್ನು ಬೇಗನೇ ವಿಲೇವಾರಿ ಮಾಡಬೇಕೆಂದು ಮನವಿ ಮಾಡಿದರು.

ಸಿಐಟಿಯು ಮುಖಂಡ ಕೆ.ಎಚ್. ಆನಂದರಾಜ್ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಏಕಪಕ್ಷೀಯ ತೀರ್ಮಾನ ಕೈ ಬಿಡಬೇಕು. ಕಾರ್ಮಿಕ ಸಂಘಟನೆಗಳ ಜೊತೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಮಿಕರ ಸಮಸ್ಯೆ ಕುರಿತು ಚರ್ಚಿಸಿ ತ್ರಿಪಕ್ಷೀಯ ತೀರ್ಮಾನಕ್ಕೆ ಬರಬೇಕು ಎಂದರು.

ಕಾರ್ಮಿಕರಿಗೆ ಹೊರೆಯಾಗಿರುವ ದಿನನಿತ್ಯ ಬಳಕೆಯ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಹಾಲಿನ ದರ ಹಾಗೂ ತರಕಾರಿಗಳ ಬೆಲೆ ಸೇರಿದಂತೆ ದಿನ ನಿತ್ಯ ಬಳಕೆಯ ವಸ್ತುವಿನ ದರ ಇಳಿಕೆ ಮಾಡಬೇಕೆಂದು ಆಗ್ರಹಿಸಿದರು.

ವಿ. ಲಕ್ಷ್ಮಣ, ಶಿವಕುಮಾರ್. ಡಿ. ಶೆಟ್ಟರ್, ಎಚ್‌.ಕೆ.ಆರ್ ಸುರೇಶ್, ಎಸ್.ಕೆ. ಆದಿಲ್ ಖಾನ್, ಮಹಮ್ಮದ್ ರಫೀಕ್, ನಾಗಮ್ಮ, ಸತೀಶ್ ಅರವಿಂದ್, ಲಕ್ಷ್ಮಣ್, ಭರಮಪ್ಪ, ಹನುಮಂತಪ್ಪ, ತಿಪ್ಪೇಶ್ ಹಾಗೂ ಇತರರಿದ್ದರು.

error: Content is protected !!