ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಕರೆ
ದಾವಣಗೆರೆ, ಜೂ.28- ನಮ್ಮ ಸಣ್ಣ ನಿರ್ಲಕ್ಷ್ಯ ಕೂಡ ಡೆಂಘಿ ಜ್ವರದಿಂದ ನರಳುವಂತೆ ಮಾಡಬಹುದು. ಆದ್ದರಿಂದ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸೊಳ್ಳೆ ಉತ್ಪತ್ತಿ ತಾಣಗಳಿಂದ ಮುಕ್ತಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಮನಗರ ಎಸ್.ಓ.ಜಿ. ಕಾಲೋನಿಯಲ್ಲಿ `ಡೆಂಘಿ ಜ್ವರ ನಿಯಂತ್ರಣ, ನಮ್ಮೆಲ್ಲರ ಜವಾಬ್ದಾರಿ` ವಾರಕ್ಕೆ ಒಂದು ದಿನ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾವು ಬಳಸಿ ಎಸೆಯುವ ಟೀ ಕಪ್, ಪ್ಲಾಸ್ಟಿಕ್ ಬಾಟಲ್, ಡಬ್ಬಗಳು, ನಿರುಪಯುಕ್ತ ವಸ್ತುಗಳಲ್ಲಿ ಮಳೆಗಾಲದಲ್ಲಿ ನೀರು ಸಂಗ್ರಹವಾಗುವುದರಿಂದ ಈಡಿಸ್ ಸೊಳ್ಳೆಯ ಲಾರ್ವಾಗಳು ಬೆಳೆಯುತ್ತವೆ. ಮನೆ, ಶಾಲಾ-ಕಾಲೇಜು, ಕಚೇರಿ, ಅಂಗನವಾಡಿ, ಅಂಗಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಗಲು ಹೊತ್ತಿನಲ್ಲಿ ಈಡಿಸ್ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸ್ವಚ್ಛತೆಗೆ ಆದ್ಯತೆ ನೀಡೋಣ ಎಂದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ, ಡೆಂಘಿ ಜ್ವರದಿಂದ ರಕ್ಷಿಸಿಕೊಳ್ಳಲು ನೀಡುವ ಸಲಹೆ-ಸೂಚನೆಗಳನ್ನು ತಪ್ಪದೇ ಪಾಲಿಸಿ, ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸೋಣ. ಸಾರ್ವಜನಿಕರಿಗೆ ಈ ಎಲ್ಲಾ ವಿಷಯಗಳ ಬಗ್ಗೆ ತಿಳಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಷಣ್ಮುಖಪ್ಪ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಕೆ.ಹೆಚ್. ಗಂಗಾಧರ್ ಮತ್ತಿತರರು ಹಾಜರಿದ್ದರು.