ಮಲೇಬೆನ್ನೂರು : ಟ್ರ್ಯಾಕ್ಟರ್ ಚಾಲಕರ ಮೇಲೆ ದಾಳಿ ಮಾಡುತ್ತಿದ್ದ ಮುಷ್ಯ ಸೆರೆ

ಮಲೇಬೆನ್ನೂರು : ಟ್ರ್ಯಾಕ್ಟರ್ ಚಾಲಕರ ಮೇಲೆ ದಾಳಿ ಮಾಡುತ್ತಿದ್ದ ಮುಷ್ಯ ಸೆರೆ

ಮಲೇಬೆನ್ನೂರು, ಜೂ.27- ಪಟ್ಟಣದಲ್ಲಿ ಟ್ರ್ಯಾಕ್ಟರ್ ಓಡಿಸುವ ಚಾಲಕರ ಮೇಲೆ ದಾಳಿ ಮಾಡುತ್ತಿದ್ದ ಮುಷ್ಯವನ್ನು ಗುರುವಾರ ಸಂಜೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.

ಕಳೆದ 8-10 ದಿನಗಳಿಂದ ಟ್ರ್ಯಾಕ್ಟರ್ ಮೇಲೆ ಕುಳಿತು ಚಾಲನೆ ಮಾಡುತ್ತಿರುವ ಯಾವ ಟ್ರ್ಯಾಕ್ಟರ್ ಕಂಡರೂ ಈ ಮುಷ್ಯ ದಾಳಿ ಮಾಡಿ ಗಾಯಗೊಳಿಸುತ್ತಿತ್ತು. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿಗಳು ಮುಷ್ಯವನ್ನು ಸೆರೆ ಹಿಡಿಯಲು ಯತ್ನಿಸಿ ವಿಫಲರಾಗಿದ್ದರು.

ಗುರುವಾರ ಉಪಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್, ವಲಯ ಅರಣ್ಯಾಧಿಕಾರಿ ಎಸ್.ವಿ.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಲಯನ್ ಸಫಾರಿ ಪಶು ವೈದ್ಯಾಧಿಕಾರಿ ಡಾ. ಮುರುಳಿ ಮನೋಹರ್ ಅವರ ತಂಡ ಮತ್ತು ಉಪಅರಣ್ಯಾಧಿಕಾರಿ ಸತೀಶ್ ಎಸ್.ಕಣವಿ, ಗುಸ್ತು ಅರಣ್ಯಪಾಲಕ ಎಸ್.ಸದನ್ ಅವರು ದಿನವೀಡಿ ಕಾರ್ಯಾಚರಣೆ ನಡೆಸಿ, ಅರವಳಿಕೆ ನೀಡಿ, ಮುಷ್ಯವನ್ನು ಸಂಜೆ 7.30 ರ ವೇಳೆಗೆ ಪುರಸಭೆ ಬಳಿ ಸೆರೆ ಹಿಡಿದಿದ್ದಾರೆ.

ಬಲೆಯಲ್ಲಿ ಸೆರೆ ಹಿಡಿದ ಮುಷ್ಯವನ್ನು ಬೋನಿನಲ್ಲಿ ಹಾಕಿಕೊಂಡು ಶಿವಮೊಗ್ಗಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಜನಜಾತ್ರೆ : ಸಂಜೆ ಪುರಸಭೆ ಬಳಿ ಮುಷ್ಯವನ್ನು ಸೆರೆ ಹಿಡಿಯುವುದನ್ನು ನೋಡಲು ನೂರಾರು ಜನ ಜಮಾಯಿಸಿದ್ದರು.

ಇದರಿಂದಾಗಿ ಹೆದ್ದಾರಿ ವಾಹನ ಚಾಲಕರಿಗೆ ಕಿರಿಕಿರಿ ಉಂಟಾಯಿತು. ಜನರಿಗೆ ಉಪಟಳ ಮಾಡುತ್ತಿದ್ದ ಮುಷ್ಯವನ್ನು ಸೆರೆ ಹಿಡಿದ ಅರಣ್ಯ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿಯನ್ನು ಮುದೇಗೌಡ್ರು ತಿಪ್ಪೇಶ್ ಅಭಿನಂದಿಸಿದರು.

ಮುಷ್ಯವನ್ನು ಸೆರೆ ಹಿಡಿದ ವಿಷಯ ತಿಳಿದ ಪಟ್ಟಣದ ಟ್ರ್ಯಾಕ್ಟರ್‌ಗಳ ಚಾಲಕರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ 6-8 ತಿಂಗಳುಗಳಿಂದ ಪಟ್ಟಣದಲ್ಲಿ ಮುಷ್ಯಗಳ ದಾಳಿ, ಉಪಟಳ ನಡೆಯುತ್ತಲೇ ಇದ್ದು, ಇದುವರೆಗೆ 3 ಮುಷ್ಯಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

error: Content is protected !!