ಹರಿಹರ, ಜೂ.24- ತಾಲ್ಲೂಕಿನಲ್ಲಿ ಇಂದು ಬೆಳಗ್ಗೆಯಿಂದ ಸುರಿದ ತುಂತುರು ಮಳೆಯಿಂದಾಗಿ, ಹೊಲದಲ್ಲಿ ಬೆಳೆಯುತ್ತಿರುವ ಬೆಳೆಗಳಿಗೆ ಜೀವ ಬಂದಂತಾಗಿ ಮತ್ತೆ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಮುಂಗಾರು ಮಳೆ ಜೂ 3 ರಿಂದ ಆರಂಭಗೊಂಡು, ಆರಂಭದಲ್ಲಿ ರೈತರ ನಿರೀಕ್ಷೆಗೆ ತಕ್ಕಂತೆ ಮಳೆಯಾಗಿದ್ದರಿಂದ, ನಗರ ಸೇರಿದಂತೆ ತಾಲ್ಲೂಕಿನ ಅನೇಕ ಗ್ರಾಮಗಳ ಜಮೀನಿನಲ್ಲಿ ಮೆಕ್ಕೆಜೋಳ, ಜೋಳ, ಅಲಸಂದಿ, ಹೆಸರು, ಸೋಯಾಬಿನ್ ಇತ್ಯಾದಿ ಬಿತ್ತನೆ ಮಾಡಲಾಗಿತ್ತು. ಆದರೆ ಈ ಬಿತ್ತನೆ ಕಾರ್ಯ ಮುಗಿದ ನಂತರ ಪುನಃ ಮಳೆ ಆಗದ ಕಾರಣ ರೈತರಲ್ಲಿ ಆತಂಕವನ್ನು ಉಂಟುಮಾಡಿತ್ತು.
ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯಾವ ಪ್ರಮಾಣದಲ್ಲಿ ಮಳೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ತುಂತುರು ಮಳೆಯಿಂದಾಗಿ ನಗರದಲ್ಲಿ ಶಾಲಾ-ಕಾಲೇಜುಗಳಿಗೆ ಓಡಾಡುವ ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೆ, ವ್ಯಾಪಾರಸ್ಥರಿಗೆ ಸಾರ್ವಜನಿಕರಿಗೆ ತೊಂದರೆ ಆಗಿದ್ದು ಕಂಡು ಬಂದಿತು. ತುಂಗಭದ್ರಾ ನದಿಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಇಲ್ಲದೆ ಇರುವುದನ್ನು ಕಾಣಬಹುದಾಗಿದೆ. ಆದರೂ ಕುಡಿಯುವ ನೀರಿಗೆ ತೊಂದರೆ ಇಲ್ಲ ಎನ್ನಲಾಗಿದೆ.