ಮಲೇಬೆನ್ನೂರು, ಜೂ.24- ಬೆಳ್ಳೂಡಿ ಗ್ರಾಮದ ಶ್ರೀ ಪಟೇಲ್ ಗುರುಬಸಪ್ಪ ಪ್ರೌಢ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರು ವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು 1985-86ನೇ ಸಾಲಿನ ಎಸ್ಸೆಸ್ಸೆಲ್ಸಿಯ ಹಿರಿಯ ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ನಡೆಸಿದರು.
ವಿಶೇಷ ಎಂದರೆ ಸುಮಾರು 54 ರಿಂದ 55 ವರ್ಷ ವಯಸ್ಸಿನ ಹಳೇ ವಿದ್ಯಾರ್ಥಿಗಳು ತಮ್ಮ ಪ್ರೌಢಶಾಲಾ ಅವಧಿಯ ಸುಮಾರು 74 ರಿಂದ 80 ವರ್ಷ ವಯಸ್ಸಿನ ನಿವೃತ್ತ ಗುರುಗಳನ್ನು ಕರೆಯಿಸಿ, ಅವರಿಗೆ ಗುರುವಂದನೆಯನ್ನು ಸಮರ್ಪಿಸಿದ ಕ್ಷಣ ಅವಿಸ್ಮರಣೀಯವಾಗಿತ್ತು.
ಹಳೇ ವಿದ್ಯಾರ್ಥಿಗಳಾದ ಮಹದೇವಪ್ಪ ಹಾಗೂ ಗುರುಮೂರ್ತಿ ಅವರು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ತಮ್ಮ ಮಕ್ಕಳಿಂದ ಸುಂದರವಾದ ರಂಗೋಲಿಗಳನ್ನು ಬಿಡಿಸಿ, ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು.
ಶಿರಾ ತಾಲ್ಲೂಕು ಗುಳಿಗೆನಹಳ್ಳಿ ಉಪ ಪ್ರಾಂಶುಪಾಲರಾದ ಶ್ರೀಮತಿ ಬಿ.ಜೆ.ಗಿರಿಜಾಂಬ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಸ್ಥಳೀಯ ಶಾಲಾ ಸಲಹಾ ಸಮಿತಿ ಅಧ್ಯಕ್ಷ ಹನುಮಂತಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಿಕ್ಷಕರಾದ ಮಹದೇವಪ್ಪ, ತಿಮ್ಮಪ್ಪ ಅವರಿಗೆ ಮತ್ತು ಅಕಾಲಿಕ ಮರಣ ಹೊಂದಿದ ಗೆಳೆಯ- ಗೆಳತಿಯರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಎಸ್.ಕೆ.ರಾಜು ಅವರ ಪ್ರಾಸ್ತಾವಿಕ ನುಡಿಗಳ ನಂತರ ಗಿರಿಜಾಂಬ, ಪ್ರಕಾಶ, ಚನ್ನಪ್ಪ ಚನ್ನೇಗೌಡ, ನೀಲಪ್ಪ, ನಾಗೇಂದ್ರಪ್ಪ, ಶ್ರೀಧರ, ಮಂಜನಾಯ್ಕ, ತಿಪ್ಪೇಸ್ವಾಮಿ ಮಲ್ಲಿಕಾರ್ಜುನ ಹಾಗೂ ಗೀತಮ್ಮ ಅವರುಗಳು ತಮ್ಮ ವಿದ್ಯಾರ್ಥಿ ಜೀವನದ ಸಂದರ್ಭಗಳನ್ನು ಮೆಲುಕು ಹಾಕುವುದರೊಂದಿಗೆ ಎಲ್ಲರನ್ನು ಹಿಂದಿನ ಕ್ಷಣಗಳಿಗೆ ಕೊಂಡೊಯ್ದರು.
ನಿವೃತ್ತ ಶಿಕ್ಷಕ ಮಲ್ಲಪ್ಪ ಮಾತನಾಡಿ, ತಾವು ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಜಾಣರೆ ಹೊರತು ಯಾರು ದಡ್ಡರಲ್ಲ ಎಂಬ ಮಾತನ್ನು ಹೇಳಿದರು
ಕನ್ನಡ ಶಿಕ್ಷಕಿ ಸರೋಜಮ್ಮ ಅವರು ಬೆಳ್ಳೂಡಿಯಲ್ಲಿ ಕಳೆದ ದಿನಗಳನ್ನು ಸ್ಮರಿಸಿಕೊಂಡು ತವರು ಮನೆಗೆ ಹಿಂದಿರುಗಿದ ಅನುಭವವಾಗುತ್ತಿದೆ ಎಂಬ ಮಾತನ್ನು ಹೇಳಿದರು,
ಶಿಕ್ಷಕ ಯು.ಎಂ.ತ್ಯಾವರೆ ಮಾತನಾಡಿ, ತಾವು ಇಲ್ಲಿ ಕಳೆದ ಎರಡು ಅವಧಿಯ 15 ವರ್ಷಗಳ ಸೇವೆಯ ದಿನಗಳನ್ನು ಮೆಲುಕು ಹಾಕಿದರು.
ಶಿಕ್ಷಕಿ ಡಿಸೋಜಾ ಸಹ ಇಲ್ಲಿ ಕಳೆದ ಸೇವಾ ಅವಧಿಯ ಸುಮಧುರ ಕ್ಷಣಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು.
ಶಿಕ್ಷಕ ಬಿ.ಜಿ.ಚಂದ್ರಪ್ಪ ಮಾತನಾಡಿ, ಗುರುವಂದನಾ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಮಹಾದೇವಪ್ಪನವರ ಧರ್ಮಪತ್ನಿ ಸಹ ಕಾರ್ಯಕ್ರಮದಲ್ಲಿ ತಮ್ಮ ಪತಿಯವರ ಸೇವಾನಿಷ್ಠೆ ಹಾಗೂ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಅನಾರೋಗ್ಯದ ಕಾರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದ ಯು.ಎಸ್.ಕೊತ್ತಂಬರಿ ಅವರು ವಾಟ್ಸಪ್ ಮೂಲಕ ಧ್ವನಿ ಸಂದೇಶ ಕಳುಹಿಸಿ ಶುಭ ಹಾರೈಸಿದರು.
ಹೊಳೆಸಿರಿಗೆರೆ ಉಪನ್ಯಾಸಕ ಎ.ಎಸ್.ಜಗದೀಶ್ ನಿರೂಪಿಸಿದರು. ಅಮೃತ್ ಆರ್ಗ್ಯಾನಿಕ್ ಫರ್ಟಿಲೈಜರ್ ಕಂಪನಿಯ ರೀಸನಲ್ ಮ್ಯಾನೇಜರ್ ಜಯಣ್ಣ ಸ್ವಾಗತಿಸಿದರು. ರಚನಾ ಎಲೆಕ್ಟ್ರಿಕಲ್ ತಿಪ್ಪೇಸ್ವಾಮಿ ವಂದಿಸಿದರು.