ದಾವಣಗೆರೆ, ಜೂ.24- ಸಸಿಗಳನ್ನ ನೆಡುವುದಷ್ಟೇ ಅಲ್ಲ. ನೆಟ್ಟ ಸಸಿಗಳನ್ನ ಪೋಷಣೆ ಮಾಡುವ ಜವಾಬ್ದಾರಿಯೂ ನಮ್ಮಿಂದಾಗಬೇಕೆಂದು ಕರುನಾಡ ಕನ್ನಡ ಸೇನೆಯ ಅಧ್ಯಕ್ಷ ಗೋಪಾಲಗೌಡರು ತಿಳಿಸಿದರು.
ಜಿಲ್ಲಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ನಗರದ ರಶ್ಮಿ ಹೆಣ್ಣು ಮಕ್ಕಳ ವಸತಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಸ್ಥ್ಯ ಪರಿಸರದ ದೃಷ್ಟಿಯಿಂದ ಎಲ್ಲರೂ ಮರಗಳ ಸಂರಕ್ಷಣೆ ಮಾಡುವ ಜತೆಗೆ ನೆಟ್ಟ ಗಿಡ ಮರವಾಗುವ ತನಕ ಕಾಳಜಿ ತೋರಬೇಕೆಂದು ಹೇಳಿದರು.
ಪರಿಷತ್ತಿನ ಮಹಿಳಾ ಘಟಕದ ಎಸ್. ಉಮಾದೇವಿ ಹಿರೇಮಠ್ ಮಾತನಾಡಿ, ಗಿಡಗಳನ್ನು ಮನೆಯ ಮಕ್ಕಳಂತೆ ಪೋಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪರಿಸರ ದಿನವನ್ನು ಕೇವಲ ಒಂದು ದಿನ ಆಚರಣೆ ಮಾಡದೆ ವರ್ಷಪೂರ್ತಿ ಸಸಿ ನೆಟ್ಟು, ಅವುಗಳು ಹಾಳಾಗದಂತೆ ಕಾಳಜಿ ವಹಿಸೋಣ ಎಂದರು.
ಈ ವೇಳೆ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಅಣಬೇರು ತಾರೇಶ್, ಮಹಾಂತೇಶ್, ಬಿ.ಎಂ.ಜಿ. ವೀರೇಶ್, ರಶ್ಮಿ ಶಾಲೆಯ ಮಕ್ಕಳು ಮತ್ತು ಸಿಬ್ಬಂದಿ ಇದ್ದರು.
ಅಮರೇಶ್ ಪ್ರಾಸ್ತಾವಿಕ ಮಾತನಾಡಿದರು. ಉಷಾ ನಿರೂಪಿಸಿದರು. ಲಲಿತ್ ಕುಮಾರ್ ಜೈನ್ ವಂದಿಸಿದರು.