ಪರಿವರ್ತನಾ ವೇದಿಕೆಯ `ಪ್ರಾರಂಭೋತ್ಸವ’ ಕಾರ್ಯಕ್ರಮದಲ್ಲಿ ಡಾ.ಬಿ.ಟಿ. ಅಚ್ಯುತ್
ಹಸಿ ಕಸ ಮತ್ತು ಒಣ ಕಸವನ್ನು ವ್ಯವಸ್ಥಿತವಾಗಿ ಮನೆಯಲ್ಲಿಯೇ ವಿಂಗಡಣೆ ಮಾಡಿದರೆ ಊರಿನ ಕಸ, ಬೆಟ್ಟದಂತೆ ಬೆಳೆಯುವುದಿಲ್ಲ.
– ಎಸ್.ಟಿ. ವೀರೇಶ್, ಮಾಜಿ ಮೇಯರ್
ದಾವಣಗೆರೆ, ಜೂ.22- ಪರಿಸರ ಜಾಗೃತಿ ಕೇವಲ ಸರ್ಕಾರದ ಜವಾಬ್ದಾರಿಯೆಂದು ಪರಿಗಣಿಸದೇ ಸಮಾಜದಲ್ಲಿನ ಪ್ರತಿಯೊಬ್ಬನೂ ಪರಿಸರ ರಕ್ಷಣೆಗಾಗಿ ಪಣ ತೊಡಬೇಕೆಂದು ಬಿಐಇಟಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಬಿ.ಟಿ. ಅಚ್ಯುತ್ ತಿಳಿಸಿದರು.
ನಗರದ ಹಿಮೊಫಿಲಿಯಾ ಸೊಸೈಟಿ ಸಭಾಂ ಗಣದಲ್ಲಿ ಶನಿವಾರ ಆಯೋಜಿಸಿದ್ದ ಪರಿವರ್ತನಾ ವೇದಿಕೆಯ `ಪ್ರಾರಂಭೋತ್ಸವ’ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಿಯಿಲ್ಲದ್ದನ್ನು ಬದಲಾಯಿಸುವುದೇ ಪರಿವರ್ತನೆ. ಈ ನಿಟ್ಟಿನಲ್ಲಿ ಪರಿಸರ ಶುದ್ಧವಾಗಿಸುವ ದೃಷ್ಟಿಯಿಂದ `ಪರಿವರ್ತನಾ ವೇದಿಕೆ’ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಈ ಹಿಂದೆ ವೇದಿಕೆಯವರು ನಗರದಲ್ಲಿ ಕಸ-ರಸ ಅಭಿಯಾನದ ಮೂಲಕ ಪರಿಸರ ಜಾಗೃತಿ ಮೂಡಿಸಿದ್ದರು. ನಗರವು ಪರಿವರ್ತನಾ ವೇದಿಕೆ ಯಿಂದ ಇನ್ನಷ್ಟು ಶುದ್ಧವಾಗಲಿ ಎಂದು ಆಶಿಸಿದರು.
ಮಾಜಿ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಕಸ ಉತ್ಪತ್ತಿ ಮಾಡುವವನೇ ಕಸ ವಿಲೆವಾರಿ ಮಾಡುವ ಜವಾಬ್ದಾರಿ ಹೊರಬೇಕು ಎಂದು ಹೇಳಿದರು.
ಕಳೆದ ಬೇಸಿಗೆಯಲ್ಲಿ ಎಲ್ಲರೂ ನೀರಿನ ಬವಣೆಯಿಂದ ಬಳಲಿದ್ದೇವೆ. ಇಂತಹ ಸಂಕಷ್ಟ ಸಮಾಜಕ್ಕೆ ಬರಬಾರದೆಂದರೆ ಕೇವಲ ಗಿಡ ನೆಡುವ ಕಾರ್ಯವಷ್ಟೆ ಮಾಡದೇ, ಮರ ಬೆಳಸುವ ಮತ್ತು ರಕ್ಷಿಸುವ ಕಾಯಕದಲ್ಲಿ ತೊಡಗಬೇಕು ಎಂದು ಹೇಳಿದರು. ಈಗಾಗಲೇ ವಿಜ್ಞಾನಿಗಳು ಜಾಗತೀಕ ತಾಪಮಾನ ಕುರಿತು ಮುನ್ನೆಚ್ಚರಿಕೆ ನೀಡಿದ್ದು, ದೇಶದಲ್ಲಿ ಅಧಿಕ ತಾಪಮಾನದಿಂದ ಸಾವು ಸಂಭವಿಸಿದ ನಿದರ್ಶನಗಳಿವೆ. ಹಾಗಾಗಿ ಪರಿಸರ ಕಲುಷಿತ ಗೊಳಿಸದಂತೆ ಎಚ್ಚರಿಸಿದರು.
ಆವರಗೊಳ್ಳದ ಕಸ ವಿಲೆವಾರಿ ಘಟಕಕ್ಕೆ ತಿಂಗಳ ಹಿಂದೆ ಬೆಂಕಿ ಬಿದ್ದಿತ್ತು, ಮಳೆಗಾಲ ಬಂದರೂ ಬೆಂಕಿ ನಂದಿಲ್ಲ. ಇಂತಹ ದುರ್ಘಟನೆಯಿಂದ ಅಂತರ್ಜಲ ಹಾಗೂ ವಾತಾವರಣದಲ್ಲಿ ವಿಷಾನಿಲ ಬೆರೆತು ಜೀವಿಗಳಿಗೆ ತೊಂದರೆಯಾಗಲಿದೆ ಎಂದು ಹೇಳಿದರು.
ವೈದ್ಯ ಡಾ. ಸುರೇಂದ್ರ ಪ್ರಾಸ್ತಾವಿಕ ಮಾತನಾಡಿ, ಬಡಾವಣೆ ವೇದಿಕೆಯಿಂದ ಪ್ರಾರಂಭವಾದ ಪರಿಸರ ಜಾಗೃತಿಯ ಪಯನ ಪರಿವರ್ತನಾ ವೇದಿಕೆಯಾದ ಬಗೆಯನ್ನು ವಿವರಿಸಿದರು.
ಮುಂದಿನ ಪೀಳಿಗೆಗೆ ಸ್ವಾಸ್ಥ್ಯ ಪ್ರಕೃತಿ ನೀಡುವ ಉದ್ದೇಶದಿಂದ ಮಳೆ ನೀರು ಕೊಯ್ಲು, ಕಸ ವಿಲೆವಾರಿ ಮತ್ತು ಗಿಡ ನೆಡುವ ಮೂಲಕ ಪ್ರಕೃತಿಯ ಸೇವೆ ಗೈಯುವ ದೃಷ್ಟಿಯನ್ನು ಪರಿವರ್ತನಾ ವೇದಿಕೆ ಹೊಂದಿದೆ ಎಂದು ತಿಳಿಸಿದರು.
ಸಿವಿಲ್ ಇಂಜಿನಿಯರ್ ಶ್ರೀನಿವಾಸ್ ಮೂರ್ತಿ ಅವರು `ಮಳೆ ನೀರು ಕೊಯ್ಲು’ ವಿಷಯ ಕುರಿತು ಪಿಪಿಟಿ ಮೂಲಕ ವಿವರಣೆ ನೀಡಿದರು.
ಈ ವೇಳೆ ಹಿರಿಯ ವೈದ್ಯೆ ಡಾ. ಶಾಂತಾ ಭಟ್, ಕಿರುವಾಡಿ ಗಿರಿಜಮ್ಮ, ವೇದಿಕೆಯ ಕಾರ್ಯದರ್ಶಿ ಮಮತಾ, ಪಶು ವಿಷಯ ತಜ್ಞ ಡಾ. ಜಯದೇವಪ್ಪ ಮತ್ತಿತರರಿದ್ದರು.