ಇಂಧನ ಬೆಲೆ ವಿರೋಧಿಸಿ ಹರಿಹರದಲ್ಲಿ ಬಿಜೆಪಿ ಪ್ರತಿಭಟನೆ

ಇಂಧನ ಬೆಲೆ ವಿರೋಧಿಸಿ ಹರಿಹರದಲ್ಲಿ ಬಿಜೆಪಿ ಪ್ರತಿಭಟನೆ

ರಾಜ್ಯ ಸರ್ಕಾರ ರೈತ ಮತ್ತು ಜನ ವಿರೋಧಿ : ಶಾಸಕ ಬಿ.ಪಿ.ಹರೀಶ್ ಆಕ್ರೋಶ

`ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನರ ನೆಮ್ಮದಿ ಕಸಿಯುತ್ತಿದೆ’

– ಎಸ್.ಎಂ‌. ವೀರೇಶ್ ಹನಗವಾಡಿ  

ಹರಿಹರ, ಜೂ.22- ರಾಜ್ಯದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ, ನಗರದಲ್ಲಿ ಭಾರತೀಯ ಜನತಾ ಪಕ್ಷದ  ಕಾರ್ಯಕರ್ತರು   ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. 

ಈ ವೇಳೆ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ಮಾಡುತ್ತಿ ರುವ ಕಾಂಗ್ರೆಸ್ ಸರ್ಕಾರ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ದರ 3 ರೂಪಾಯಿ ಮತ್ತು ಡಿಸೇಲ್ ದರ 3.5 ರೂಪಾಯಿ ಹೆಚ್ಚಳಕ್ಕೆ ಮುಂದಾಗಿ ನಾಡಿನ ಜನತೆಯನ್ನು ಸಂಕಷ್ಟದ ದಿನಗಳಲ್ಲಿ ಕಳೆಯುವಂತೆ ಮಾಡಿದೆ ಎಂದು ದೂರಿದರು.

ಅಲ್ಲದೇ, ರಾಜ್ಯದ ಎಸ್ಸಿ, ಎಸ್ಟಿ ಅನುದಾನವನ್ನು ಬೇರೆ ಯಾವುದೋ ಕೆಲಸಕ್ಕೆ ಬಳಕೆ ಮಾಡುವ ಮೂಲಕ ಬಡವರಿಗೆ ಅನ್ಯಾಯ ಮಾಡುತ್ತಿದ್ದು, ಇದೊಂದು ರೈತ ಮತ್ತು ಜನ ವಿರೋಧಿ ಸರ್ಕಾರವಾಗಿದೆ ಎಂದು ಹರೀಶ್  ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಾದ್ಯಂತ ಈಗಾಗಲೇ ಬರಗಾಲದಿಂದ ರೈತರು ಬಹಳಷ್ಟು ಸಂಕಷ್ಟದ ಸ್ಥಿತಿಯಲ್ಲಿ ಇರುವುದರಿಂದ ಅವರಿಗೆ ನೆರವು ನೀಡುವಂತಹ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡದೇ, ದಿನ ನಿತ್ಯದ ಬದುಕಿಗೆ ಅವಶ್ಯವಾಗಿರುವ ಪೆಟ್ರೋಲ್, ಡಿಸೇಲ್ ದರವನ್ನು ಹೆಚ್ಚಿಸಿ ಮತ್ತಷ್ಟು ಚಿಂತೆಯಲ್ಲಿ ಜೀವನ ನಡೆಸುವಂತಹ ಸನ್ನಿವೇಶ ಸೃಷ್ಟಿ ಮಾಡುವುದಕ್ಕೆ ಮುಂದಾಗಿದೆ, ಈ ಬೆಳವಣಿಗೆಯಿಂದ ಹಿಂದೆ ಸರಿಯದೇ ಹೋದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ‌. ವೀರೇಶ್ ಹನಗವಾಡಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಜನರ ನೆಮ್ಮದಿ ಕಸಿದುಕೊಳ್ಳಲು ಮುಂದಾಗಿದೆ. ಅಬಕಾರಿ ಸುಂಕ, ಆಸ್ತಿ ನೋಂದಣಿ ಶುಲ್ಕ, ಪಹಣಿ ಶುಲ್ಕ, ಮೂರು ಬಾರಿ ವಿದ್ಯುತ್ ಶುಲ್ಕ, ಬೀಜ ಗೊಬ್ಬರ ಸೇರಿದಂತೆ ಹಲವಾರು ದರವನ್ನು ದುಪ್ಪಟ್ಟು ಮಾಡುತ್ತಾ, `ಬರೆ’ಯ ಭಾಗ್ಯವನ್ನು ನೀಡುತ್ತಾ ಬಂದು, ಒಂದು ರೀತಿಯಲ್ಲಿ ಸೇಡಿನ ರಾಜಕೀಯ ಮಾಡುವುದಕ್ಕೆ ಮುಂದಾಗಿದೆ. ಇದರಿಂದಾಗಿ ರಾಜ್ಯದಾದ್ಯಂತ ಜನರು ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ  ಚಂದ್ರಶೇಖರ್ ಪೂಜಾರ್, ನಗರಸಭೆ ಸದಸ್ಯ ಹನುಮಂತಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಐರಣಿ, ನಗರ ಘಟಕದ ಅಧ್ಯಕ್ಷ ಅಜೀತ್ ಸಾವಂತ್, ಪ್ರಧಾನ ಕಾರ್ಯದರ್ಶಿ ತುಳಜಪ್ಪ ಭೂತೆ, ಬಾತಿ ಚಂದ್ರಶೇಖರ್, ಐರಣಿ ನಾಗರಾಜ್, ಶ್ರೀನಿವಾಸ್ ಚಂದಪೂರ್, ಮಾರುತಿ ಶೆಟ್ಟಿ, ಸಂತೋಷ್ ಗುಡಿಮನಿ, ಬೆಣ್ಣೆ ಸಿದ್ದೇಶ್, ರವಿ ರಾಯ್ಕರ್, ಗಿರೀಶ್, ಪ್ರಶಾಂತ್, ಮೋತಿ ಲಾಲ್ ಕಿರೋಜಿ, ರಾಜು ಕಿರೋಜಿ, ಆಟೋ ರಾಜು, ಪ್ರಭಾಕರ್, ಗುರು, ರವಿಕುಮಾರ್, ಪೋಟೋ ಪ್ರಶಾಂತ್, ಅದ್ವೈತ, ಕಾರ್ತಿಕ್, ಭಾರತ್ ಶೆಟ್ಟಿ ಇತರರು ಪಾಲ್ಗೊಂಡಿದ್ದರು.

error: Content is protected !!