ರಾಮಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್ ಕಳಕಳಿ
ಮಾಯಕೊಂಡ, ಜೂ. 23- ಕೊರೊನಾ ಸಂದರ್ಭದಲ್ಲಿ ಶುದ್ಧವಾದ ಗಾಳಿ ಸಿಗದೇ ಅದೆಷ್ಟೋ ಜನರು ಪ್ರಾಣ ಹಾನಿ ಮಾಡಿಕೊಂಡಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸಿ ಉತ್ತಮ ಪರಿಸರ ಕಲ್ಪಿಸಿಕೊಳ್ಳಬೇಕಾಗಿದೆ ಎಂದು ರಾಮಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್ ಅವರು ತಿಳಿಸಿದರು.
ತಾಲ್ಲೂಕಿನ ಮಾಯಕೊಂಡ ಹೋಬಳಿಯ ರಾಮಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಮಾತೃಶ್ರೀ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಪರಿಸರ ದಿನಾಚರಣೆ ಹಾಗೂ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿದ ಕಾರ್ಯಕ್ರಮಕ್ಕೆ ಸಸಿಗಳನ್ನು ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಾಮಾಜಿಕ ಸೇವೆಗಳಲ್ಲಿ ಸಾಕಷ್ಟು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಒಂದು ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿವೆ. ಇಂತಹ ಸಂಸ್ಥೆಗಳಿಗೆ ಸರ್ಕಾರದಿಂದ ಸೌಲಭ್ಯಗಳು ಬೇಕಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಮೇಲೆ ಆಗುತ್ತಿರುವ ಅಂತಹ ದೌರ್ಜನ್ಯಗಳನ್ನು ತಡೆಗಟ್ಟುವ ಅರಿವು ಕಾರ್ಯಕ್ರಮ ಮಾಡಬೇಕಾಗಿದೆ ಎಂದು ತಿಳಿಸಿದರು.
ಮಾತೃಶ್ರೀ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಎ.ಎಲ್. ಕಿರಣ್ ಕುಮಾರ್ ಮಾತನಾಡಿ ಹಣ ಇದ್ದವನು ಶ್ರೀಮಂತ ಅಲ್ಲ, ಆರೋಗ್ಯ ಇದ್ದವನು ಶ್ರೀಮಂತ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆ ಒಂದು ನಿಟ್ಟಿನಲ್ಲಿ ಪರಿಸರ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.
ಪರಿಸರವನ್ನು ನಾವು ಅಭಿವೃದ್ದಿ ಮಾಡಿದರೆ ಮುಂದಿನ ಪೀಳಿಗೆಗೆ ನಾವು ಉತ್ತಮ ಪರಿಸರ ವನ್ನು ನಾವು ಕೊಡುಗೆಯಾಗಿ ನೀಡಬಹುದು. ಒಂದು ಮರ ಕಡಿದರೆ ಎರಡು ಗಿಡಗಳನ್ನು ನೆಡಬೇಕು ಎನ್ನುವ ನಿಯಮವನ್ನು ಅನುಸರಿಸಿ ದರೆ ಮುಂದೊಂದು ದಿನ ಪರಿಸರ ಅಭಿವೃದ್ಧಿ ಯಾಗುವುದು ಖಂಡಿತ ಎಂದು ತಿಳಿಸಿದರು.
ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಶಂಭುಲಿಂಗಪ್ಪ, ಉಪಾಧ್ಯಕ್ಷರಾದ ಶೋಭಾ, ಆಶಾ ಕಾರ್ಯಕರ್ತೆ ವನಜಾಕ್ಷಿ, ಶಿಕ್ಷಕರಾದ ವನಿತಾ, ವೇದಾವತಿ, ಹೆಲ್ತ್ ಇನ್ಸ್ಪೆಕ್ಟರ್ ಕೊಟ್ರಯ್ಯ, ಸಂಸ್ಥೆಯ ಉಪಾಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಯೋಗೇಶ್, ಸದಸ್ಯರಾದ ಪ್ರದೀಪ, ಪಿ. ಲಕ್ಷ್ಮಿ ಡಿ. ಆನಂದ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.