ರಾಣೇಬೆನ್ನೂರು, ಜೂ.23- ರಾಜ್ಯದಲ್ಲಿ ಮುಂಗಾರು ಮಳೆ ರೈತನ ಮೇಲೆ ಕರುಣೆ ತೋರಿದ್ದು, ರೈತನಿಗೆ ಸಮರ್ಪಕ ಬಿತ್ತನೆ ಬೀಜ ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಸಂತೋಷ ಪಾಟೀಲ್ ಆರೋಪಿಸಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ವರುಣನ ಅವಕೃಪೆಗೆ ಸಿಲುಕಿ ಸಂಕಟ ಪಟ್ಟ ರೈತನ ಬದುಕು, ಈ ವರ್ಷ ರಾಜ್ಯ ಸರ್ಕಾರ ಹಾಗೂ ಇಲಾಖೆಯ ನಿರ್ಲಕ್ಷ್ಯದಿಂದ ಸಂಕಟ ಪಡುವಂತಾಗಿದೆ ಎಂದು ದೂರಿದರು.
ಮಾರಕಟ್ಟೆಯಲ್ಲಿ ಗೊಬ್ಬರ ಮತ್ತು ಬೀಜದ ಕೊರತೆ ಕಾಣುತ್ತಿದ್ದು, ರೈತರು ಹೆಚ್ಚಿನ ಮೊತ್ತವನ್ನು ಬಿತ್ತನೆ ಬೀಜಕ್ಕೆ ವ್ಯಯಿಸುತ್ತಿದ್ದಾರೆ ಮತ್ತು ಕಳಪೆ ಬೀಜದ ಸಂಕಟಕ್ಕೆ ತುತ್ತಾದ ರೈತನ ಬಗ್ಗೆ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ನಿಗಾವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರು.
ಬೀಜ-ಗೊಬ್ಬರಕ್ಕಾಗಿ ಹೆಚ್ಚು ಹಣ ಕಳೆದುಕೊಂಡ ರೈತರ ಖಾತೆಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು ಮತ್ತು ನಗರದಲ್ಲಿ ಮಳೆಯಿಂದಾಗಿ ಹಾನಿಯಾದ ನೆಹರು ಮಾರುಕಟ್ಟೆಯ ವರ್ತಕರಿಗೆ ನಗರಸಭೆ ಪರಿಹಾರ ಸೂಚಿಸ ಬೇಕೆಂದು ಒತ್ತಾಯಿಸಿದ್ದಾರೆ. ಈ ವೇಳೆ ಮುಖಂಡರಾದ ಯುವರಾಜ ಬಾರಾಟಿಕ್ಕೆ, ರಾಮಣ್ಣ ಹೊನ್ನಾಳಿ ಇದ್ದರು.