ಮಲ್ಲಶೆಟ್ಟಿಹಳ್ಳಿ ಜಾಕ್ ವೆಲ್ ಕಮ್ ಪಂಪ್ ಹೌಸ್-2ಗೆ ಭೇಟಿ ನೀಡಿ ಪರಿಶೀಲನೆ
ದಾವಣಗೆರೆ, ಜೂ. 21 – ಈ ಬಾರಿ ಮುಂಗಾರು ಮಳೆ ಸಮೃದ್ಧಿಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿರುವುದರಿಂದ 22 ಕೆರೆಗಳನ್ನು ತುಂಬಿಸುವ ರಾಜನಹಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ನಿರ್ವಹಣೆ ಮಾಡುವ ಗುತ್ತಿಗೆದಾರರು ಮಾಡಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ನೀಡಿದರು.
ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿಯಿರುವ ಜಾಕ್ ವಾಲ್ ಕಮ್ ಪಂಪ್ ಹೌಸ್ ನಂ- 2 ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜನಹಳ್ಳಿ ಬಳಿಯಿರುವ ಮೊದಲ ಜಾಕ್ ವಾಲ್ ನಿಂದ ಮಲ್ಲಶೆಟ್ಟಿ ಬಳಿಯಿರುವ ಎರಡನೇ ಜಾಕ್ ವಾಲ್ ನ ಕೆರೆಗೆ ನೀರು ಹರಿಸಲಾಗುತ್ತಿದೆ. ಆದರೆ ಪೈಪ್ ನಲ್ಲಿ ಕಾಲು ಭಾಗ ನೀರು ಬರುತ್ತಿಲ್ಲ. ನೀರು ಬಿಟ್ಟು ಎರಡ್ಮೂರು ದಿನಗಳು ಆಗಿದೆ ಇನ್ನೂ ಕೆರೆಯ ತಳಭಾಗದಲ್ಲೇ ಇದೆ.
ಮೊದಲ ಜಾಕ್ ವೆಲ್ ನಲ್ಲಿ ಒಂದೇ ಮೋಟಾರು ಆನ್ ಮಾಡಿರುವುದರಿಂದ ಪೈಪ್ ನಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಕೆರೆ ಭರ್ತಿಯಾಗಲು ಎಷ್ಟು ದಿನ ಬೇಕು. ಎರಡು ತಿಂಗಳಾದರೂ ಕೆರೆ ತುಂಬುವುದಿಲ್ಲ. ಇಲ್ಲಿಂದ ಮುಂದಿನ ಕೆರೆಗಳಿಗೆ ನೀರು ಯಾವಾಗ ಹರಿಯಬೇಕು. ಮೊದಲ ಜಾಕ್ ವೆಲ್ ನ ಇನ್ನೊಂದು ಮೋಟಾರು ಆನ್ ಮಾಡಿದರೆ ಎರಡು ಮೋಟಾರುಗಳ ಫ್ರಜರ್ ನಿಂದ ಪೈಪ್ ತುಂಬ ನೀರು ಬಂದರೆ ಕೆರೆ ತುಂಬಿಸಬಹುದು. ಇಲ್ಲಿಂದ ಮುಂದಿನ ಕೆರೆಗಳಿಗೆ ನೀರು ಹರಿಸಬಹುದು ಎಂದರು.
ಅಲ್ಲದೇ ಮಲ್ಲಶೆಟ್ಟಿಹಳ್ಳಿಯ ಎರಡನೇ ಜಾಕ್ ವಾಲ್ ನಲ್ಲಿರುವ ಮೂರು ಮೋಟಾರುಗಳಲ್ಲಿ ಎರಡು ಕೆಟ್ಟಿವೆ. ಒಂದು ಸುಸ್ಥಿತಿಯಲ್ಲಿದೆ. ಕೆಟ್ಟಿರುವ ಎರಡು ಮೋಟಾರುಗಳನ್ನು ಕೂಡಲೇ ದುರಸ್ತಿ ಮಾಡಬೇಕು. ಇಲ್ಲಿನ ಕೆರೆ ತುಂಬಿದ ಬಳಿಕ ಮುಂದಿನ ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ನೆರವಾಗುವ ಕೆಲಸ ಮಾಡಬೇಕೆಂದು ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
22 ಕೆರೆಗಳ ರಾಜನಹಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಪೈಪ್ ಲೈನ್ ಮಾರ್ಗದ ಅಲ್ಲಲ್ಲಿ ಸಣ್ಣಪುಣ್ಣ ಪೈಪ್ ನಲ್ಲಿ ಸಮಸ್ಯೆಗಳು ಇದ್ದು, ಅಧಿಕಾರಿಗಳು ಕೂಡಲೇ ದುರಸ್ತಿಗೊಳಿಸಿ ಸಮರ್ಪಕವಾಗಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. ಜಗಳೂರು ಮತ್ತು ಭರಮಸಾಗರ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿರುವಂತೆ ಈ ಭಾಗದ 22 ಕೆರೆಗಳನ್ನು ತುಂಬಿಸುವ ರಾಜನಹಳ್ಳಿ ಏತ ನೀರಾವರಿ ಯೋಜನೆಯ ಕೆರೆಗಳಿಗೆ ನೀರು ಹರಿಯುವಂತೆ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.
ಈ ಯೋಜನೆಯ ಆರಂಭದಲ್ಲಿ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ ಪರಿಣಾಮ ಆಗಾಗ ಪೈಪ್ ಲೈನ್ ಹೊಡೆದು ಮಳೆಗಾಲದಲ್ಲಿ 22 ಕೆರೆಗಳಿಗೆ ಸಂಪೂರ್ಣ ನೀರು ತುಂಬಿಸಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಹೊಸ ಪೈಪ್ ಲೈನ್ ಕಾಮಗಾರಿ ಮಾಡಿದರೆ ಕೆರೆಗಳಿಗೆ ಸಮಪರ್ಕವಾಗಿ ನೀರು ತುಂಬಿಸಬಹುದು ಎಂದು ಅವರು ಹೇಳಿದರು.
ಈ ಬಗ್ಗೆ ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ನಾವು ಚರ್ಚಿಸಿದ ಬಳಿಕ ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರ ಮೇಲೆ ಒತ್ತಡ ಹಾಕಿ ರೈತರಿಗೆ ನೀರೊದಗಿಸುವ ಕೆಲಸ ಮಾಡುವುದಾಗಿ ಶಾಸಕ ಬಸವಂತಪ್ಪ ಅವರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಚಂದ್ರಣ್ಣ, ಶಿವು ಪ್ರಕಾಶ್ ಪಾಟೀಲ್ ಹಾಜರಿದ್ದರು.