ನೂತನ ಕಾಯ್ದೆಗಳಿಂದ ಶಿಕ್ಷೆ ಪ್ರಮಾಣ ಹೆಚ್ಚಾಗಬೇಕು

ನೂತನ ಕಾಯ್ದೆಗಳಿಂದ ಶಿಕ್ಷೆ ಪ್ರಮಾಣ ಹೆಚ್ಚಾಗಬೇಕು

ಹಿಮಾಚಲ ಪ್ರದೇಶದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಆಶಯ

ದಾವಣಗೆರೆ, ಜೂ. 21 – ಆರೋಪ ಪಟ್ಟಿ ದಾಖಲಿಸಿದ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಭಾರತದಲ್ಲಿ ಶೇ.50ಕ್ಕಿಂತ ಕಡಿಮೆ ಇದೆ. ನೂತನ ಕಾಯ್ದೆಗಳ ಜಾರಿ ನಂತರವಾದರೂ ಶಿಕ್ಷೆಯ ಪ್ರಮಾಣ ಹೆಚ್ಚಾಗಬೇಕು ಎಂದು ಹಿಮಾಚಲ ಪ್ರದೇಶದ ಹೈಕೋರ್ಟ್ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಆಶಿಸಿದ್ದಾರೆ.

ಜಿಲ್ಲಾ ವಕೀಲರ ಸಂಘದ ವತಿಯಿಂದ ವಕೀಲರ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷಿ ಕಾಯ್ದೆಗಳ ಕುರಿತ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಲ ವಿಶೇಷ ಕಾಯ್ದೆಗಳಲ್ಲಂತೂ ಶಿಕ್ಷೆಯಾಗುವ ಪ್ರಮಾಣ ಶೇ.13ಕ್ಕಿಂತ ಕಡಿಮೆ ಇದೆ. ಶಿಕ್ಷೆಯ ಪ್ರಮಾಣ ಕಡಿಮೆಯಾಗಿರುವುದಕ್ಕೆ ಏನು ಕಾರಣ ಎಂಬಬಗ್ಗೆ ವ್ಯಾಪಕ ವಿಶ್ಲೇಷಣೆ ನಡೆಯಬೇಕಿದೆ. ನ್ಯಾಯಿಕ ವ್ಯವಸ್ಥೆಯ ಯಾವುದೇ ಅಂಗದಲ್ಲಿ ಲೋಪಗಳಿದ್ದರೆ ಬಗೆಹರಿಸಬೇಕಿದೆ ಎಂದು ನ್ಯಾಯಮೂರ್ತಿ ನಾರಾಯಣಸ್ವಾಮಿ ಹೇಳಿದರು.

ಜುಲೈ 1ರಿಂದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷಿ ಕಾಯ್ದೆಗಳು ಜಾರಿಯಾಗಲಿವೆ. ನಂತರವಾದರೂ ಶಿಕ್ಷೆಯಾಗುವ ಪ್ರಮಾಣ ಹೆಚ್ಚಾಗಬೇಕು. ಶಿಕ್ಷೆಯ ಪ್ರಮಾಣ ಹೆಚ್ಚಾಗದೇ ಕಾಯ್ದೆಗಳ ಮರು ಪರಿಶೀಲನೆಯ ಅಗತ್ಯ ಎದುರಾಗಬಾರದು ಎಂದವರು ಹೇಳಿದರು.

ನಾನು ಭೇಟಿ ನೀಡಿದ ಕೆಲ ದೇಶಗಳಲ್ಲಿ ಆರೋಪ ಪಟ್ಟಿ ದಾಖಲಿಸಿದ ನಂತರ ಶಿಕ್ಷೆಯಾಗುವ ಪ್ರಮಾಣ ಶೇ.90ರಷ್ಟಿದೆ. ಒಂದು ವೇಳೆ ಆರೋಪಿ ಖುಲಾಸೆಯಾದರೆ ಆ ಬಗ್ಗೆ ನ್ಯಾಯಿಕ ವ್ಯವಸ್ಥೆಯಲ್ಲಿ ಗಂಭೀರ ಪರಿಶೀಲನೆಗಳು ನಡೆಯುತ್ತವೆ. ಇಲ್ಲಿಯೂ ಅಂಥದೇ ವ್ಯವಸ್ಥೆಯ ಅಗತ್ಯವಿದೆ ಎಂದು ನ್ಯಾಯಮೂರ್ತಿ ನಾರಾಯಣಸ್ವಾಮಿ ಅಭಿಪ್ರಾಯ ಪಟ್ಟರು.

ದಾವಣಗೆರೆ ಜಿಲ್ಲಾ ವಕೀಲರ ಸಂಘದವರು ವಕೀಲರ ಮರಣೋತ್ತರ ನಿಧಿ ಸ್ಥಾಪಿಸಿರುವುದು ದೇಶದಲ್ಲೇ ವಿಶಿಷ್ಟವಾಗಿದೆ. ಈ ವ್ಯವಸ್ಥೆ ರಾಜ್ಯಾದ್ಯಂತ ವಿಸ್ತರಿಸಬೇಕು. ನೆರವಿನ ಮೊತ್ತ ಹೆಚ್ಚಾಗಬೇಕು ಎಂದವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ನೂತನ ಕಾಯ್ದೆಗಳ ಕುರಿತ ಕೈಪಿಡಿಯೊಂದನ್ನು ಬಿಡುಗಡೆ ಮಾಡಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ವಕೀಲರ ಮರಣೋತ್ತರ ನಿಧಿ ವಕೀಲರ ಕುಟುಂಬದವರಿಗೆ ನೆರವಾಗುತ್ತಿದೆ. ಈ ನಿಧಿಗೆ ಸರ್ಕಾರದಿಂದಲೂ ನೆರವಿನ ಅಗತ್ಯವಿದೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ, ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್. ಪ್ರವೀಣ್ ಕುಮಾರ್ ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಉಪಸ್ಥಿತರಿದ್ದರು.

ಭಾವನ ಪತಂಗೆ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್ ಸ್ವಾಗತಿಸಿದರು.

error: Content is protected !!