ಆದರ್ಶ ಯೋಗ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಹರಿಹರದ ವೈದ್ಯಾಧಿಕಾರಿ ಡಾ. ರಾಘವೇಂದ್ರ ದುರ್ಗೋಜಿ
ದಾವಣಗೆರೆ, ಜೂ. 23 – ನಮ್ಮ ದೈನಂದಿನ ಬದುಕಿನಲ್ಲಿ ನಿತ್ಯವೂ ಒತ್ತಡದ ವಾತಾವರಣದಲ್ಲಿ ನಮ್ಮ ಆರೋಗ್ಯವನ್ನು ಮರೆತು ಬಿಟ್ಟಿದ್ದೇವೆ. ಒತ್ತಡದ ಜೀವನ ಶೈಲಿಯಿಂದ ಹೊರಬರಲು ದಿನ ನಿತ್ಯವೂ ಯೋಗಾಭ್ಯಾಸ ವನ್ನು ಮಾಡಬೇಕು. ನಮ್ಮೆಲ್ಲಾ ಅನಾರೋಗ್ಯ ಸಮಸ್ಯೆಗಳಿಗೆ ಯೋಗ, ಧ್ಯಾನ, ಪ್ರಾಣಾಯಾಮಗಳು ಸರಿಯಾದ ಮಾರ್ಗ ಎಂದು ಹರಿಹರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ತುರ್ತು ಅಪಘಾತ ಚಿಕಿತ್ಸಾ ವಿಭಾಗದ ವೈದ್ಯಾಧಿಕಾರಿ ಡಾ. ರಾಘವೇಂದ್ರ ದುರ್ಗೋಜಿ ಅಭಿಪ್ರಾಯಪಟ್ಟರು.
ನಗರದ ದೇವರಾಜ ಅರಸು ಬಡಾವಣೆ ‘ಸಿ’ ಬ್ಲಾಕ್ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ ಶ್ರೀ ಮಹಾಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಮೊನ್ನೆ ಆಯೋಜಿಸಲಾಗಿದ್ದ 10ನೇ ವರ್ಷದ ಅಂತಾರರಾಷ್ಟ್ರೀಯ ವಿಶ್ವಯೋಗ ದಿನಾಚರಣೆಯಲ್ಲಿ ಜ್ಯೋತಿ ಬೆಳಗಿಸುವುದರೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನನ್ನ ತಂದೆಯವರ ಸ್ಫೂರ್ತಿಯಿಂದ ನಾನು 80 ರ ದಶಕದಲ್ಲಿ ಮಲ್ಲಾಡಿಹಳ್ಳಿ ಸ್ವಾಮಿಗಳ ನೇರಶಿಷ್ಯರಾದ ದಾಸ್ರವರಲ್ಲಿ ಯೋಗಾಭ್ಯಾಸವನ್ನು ಕಲಿತು ಇಂದಿಗೂ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುತ್ತಿದ್ದೇನೆ. ಯೋಗದಿಂದ ತಾಳ್ಮೆ ಎಂಬ ಪಾಠವನ್ನು ಕಲಿತಿದ್ದೇನೆ. ಯೋಗವು ಭಾರತೀಯ ಋಷಿಮುನಿಗಳು ಕೊಟ್ಟ ಆರೋಗ್ಯದ ವರದಾನವಾಗಿದೆ. ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ನಿತ್ಯವೂ ಯೋಗ ಸಾಧನೆ ಮಾಡಬೇಕು. ಇಂದಿನ ಜೀವನ ಶೈಲಿಗೆ ಯೋಗವು ಅತ್ಯಂತ ಅವಶ್ಯಕವಾದ ಸಾಧನವಾಗಿದೆ ಎಂದು ಅವರು ತಮಗಾದ ಅನುಭವವನ್ನು ಹಂಚಿಕೊಂಡರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರೇಖಿ ತಜ್ಞರಾದ ಹರಿಹರದ ಕೆ. ರವೀಂದ್ರ ಮಾತನಾಡಿ, ಮನಸ್ಸು, ಶರೀರ ಮತ್ತು ಆತ್ಮ ಈ ಮೂರರ ಸಮ್ಮಿಲನ ಆಗಬೇಕು. ಇವುಗಳನ್ನು ಸರಿದಾರಿಗೆ ಕೊಂಡೊಯ್ಯುವ ಸಾಧನವೇ ಯೋಗ, ನಮ್ಮೊಳಗಿರುವ ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಯೋಗದ ಮಾರ್ಗ, ನಮ್ಮ ಆತ್ಮವು ನಮ್ಮ ಹಿಡಿತಕ್ಕೆ ಸಿಕ್ಕರೆ ನಾವು ಇಡೀ ಜಗತ್ತನ್ನೇ ಆಳಬಹುದು. ಅಂತಹ ಅದ್ಭುತ ಶಕ್ತಿ ಆತ್ಮಕ್ಕೆ ಇದೆ ಎಂದು ಆತ್ಮದ ಶಕ್ತಿ, ಸ್ವರೂಪವನ್ನು ಸಂಕ್ಷಿಪ್ತವಾಗಿ ತಿಳಿಸಿದರು.
ಪ್ರತಿಷ್ಠಾನದ ಯೋಗಗುರು ರಾಘವೇಂದ್ರ ಗುರೂಜಿ ಯೋಗ ದಿನಾಚರಣೆಯ ಮಹತ್ವ ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ಯೋಗ ಶಿಕ್ಷಕ ಲಲಿತ್ಕುಮಾರ್ ವಿ. ಜೈನ್ ಮಾಡಿದರು. ಪ್ರಸಾದ ಸೇವೆಯನ್ನು ಹಣಕಾಸು ವ್ಯವಹಾರ ಸಲಹೆಗಾರ ಮಂಜುನಾಥ್ ಹೆಚ್. ಅರ್ಪಿಸಿದರು. ರಂಗೋಲಿ ಸೇವೆಯನ್ನು ಶ್ರೀಮತಿ ಮಂಗಳಗೌರಿ ಮಾಡಿದರು. ಸಂದೀಪ್ ಒಡೋನಿ, ಭರತ್ ಒಡೋನಿ, ಸಂತೋಷ್ ಹೆಚ್., ಚೇತನ್ ಸಿ., ಶ್ವೇತಾ ಒಡೆಯರ್, ವೇದಾವತಿ ಡಿ.ಎಂ.ಎಸ್., ಮಹಾಂತೇಶ್, ಚಂದ್ರು, ಜ್ಯೋತಿಲಕ್ಷ್ಮೀ ರಾಜೇಶ್ವರಿ ಇನ್ನಿತರರು ಭಾಗವಹಿಸಿದ್ದರು.