ಬಿಟ್ಟರೆ ರಾಜ್ಯವನ್ನೂ ಒತ್ತೆ ಇಡಲಿದೆ ಕಾಂಗ್ರೆಸ್

ಬಿಟ್ಟರೆ ರಾಜ್ಯವನ್ನೂ ಒತ್ತೆ ಇಡಲಿದೆ ಕಾಂಗ್ರೆಸ್

ದಾವಣಗೆರೆ, ಜೂ. 20- ಕರ್ನಾಟಕ ರಾಜ್ಯವು ಆರ್ಥಿಕ ದಿವಾಳಿಯಾಗುವುದನ್ನು ತಡೆಯಬೇಕಿದೆ. ರಾಜ್ಯವನ್ನು ಉಳಿಸಬೇಕು. ಆರ್ಥಿಕ ಸುಸ್ತಿಗೆ ತರಬೇಕು ಎಂದರೆ ಈ ಕಾಂಗ್ರೆಸ್ ಸರ್ಕಾರ ತೊಲ ಗಬೇಕಿದೆ. ಅದಕ್ಕಾಗಿ ಬಿಜೆಪಿ ಜನಾಂದೋಲನ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಘಟಕದಿಂದ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ರಾಜ್ಯವನ್ನಾಳುವ ನೈತಿಕತೆ ಕಳೆದುಕೊಂಡಿರುವ ಸಿದ್ಧರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರದ ತಪ್ಪು ನೀತಿಗಳು, ಬಡ ಜನತೆಗೆ ಮಾರಕವಾಗಿವೆ. ಪೆಟ್ರೋಲ್-ಡೀಸೆಲ್ ತೆರಿಗೆ ಏರಿಕೆಯಿಂದಾಗಿ ಇಂದು ಅಗತ್ಯ ವಸ್ತುಗಳ ಬೆಲೆಗಳೂ ಏರಿಕೆಯಾಗಲಿವೆ. ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಹತ್ತು ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ. ಮತ ಗಳಿಸುವ ಸಲುವಾಗಿ ಗ್ಯಾರಂಟಿ ಕೊಡುವುದಾಗಿ ಹೇಳಿ ತನ್ನ ಬೇಳೆ  ಬೇಯಿಸಿಕೊಳ್ಳುತ್ತಿದೆ. ಗ್ಯಾರಂಟಿ ಯೋಜನೆಗೆ 60 ಸಾವಿರ ಕೋಟಿ ಸಂಗ್ರಹಿಸಿ ಕೊಡಲಿ. ಆದರೆ ತೆರಿಗೆ ಹಣ ಅಭಿವೃದ್ಧಿಗಾಗಿಯೇ ಬಳಕೆಯಾಗಬೇಕು ಎಂದು ಒತ್ತಾಯಿಸಿದರು. ಮೋಟಾರ್ ವೆಹಿಕಲ್ ತೆರಿಗೆ ಹೆಚ್ಚಿಸಲಾಗಿದೆ. ಹಾಲು ಹಾಗೂ ಹಾಲ್ಕೋ ಹಾಲ್‌ ದರವನ್ನೂ ಹೆಚ್ಚಿಸಲಾಗಿದೆ. ಇದೀಗ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ರಾಜ್ಯ ಸರ್ಕಾರಕ್ಕೆ ರಾಜ್ಯವನ್ನಾಳುವ ನೈತಿಕತೆ ಇಲ್ಲ. ರಾಜ್ಯ ದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ.  ಯಾವ ಕ್ಷೇತ್ರಕ್ಕೂ ಐದು ಪೈಸೆ ಅನುದಾನ ನೀಡಿಲ್ಲ. ರಾಜ್ಯದ ಜನರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಲೋಕ ಸಭೆಯಲ್ಲಿ ಹಿನ್ನಡೆಯಾಗಿರುವುದರಿಂದ  ಈಗ ಬಡವರ ಮೇಲೆ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ನಾನು ತೈಲ ಬೆಲೆಗಳ ತೆರಿಗೆ ಇಳಿಸಿ ಪೆಟ್ರೋಲ್-ಡೀಸೆಲ್ ದರ ನೂರು ರೂಪಾಯಿ ದಾಟದಂತೆ ನೋಡಿಕೊಂಡಿದೆ. ಅಂದು ಸಿದ್ದರಾಮಯ್ಯ ದೊಡ್ಡದಾಗಿ ದನಿ ಎತ್ತಿದ್ದರು. ಈಗ ಅವರ ದನಿ ಎಲ್ಲಿದೆ?  ಇಂದು ದರ ಏರಿಸಿರುವ ಸಿದ್ಧರಾಮಯ್ಯ ಬೇರೆ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ ಇರುವುದಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕಿದೆ. ನಮ್ಮ ರಾಜ್ಯದ ಜನರಿಗೆ ಅನುಕೂಲ ಮಾಡುವುದು ಬಿಟ್ಟು ಮಿತ್ರ ಪಕ್ಷಗಳ ಸರ್ಕಾರ ಉಳಿಸಲು ರಾಜ್ಯದ ಜನತೆಗೆ ಬರೆ ಎಳೆಯುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ಶಾಸಕ  ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಮುಖಂಡರುಗಳಾದ ಯಶವಂತರಾವ್ ಜಾಧವ್, ವೀರೇಶ್ ಹನಗವಾಡಿ, ಕೆ.ಪ್ರಸನ್ನಕುಮಾರ್, ಕೆ.ಎಂ. ವೀರೇಶ್, ಲೋಕಿಕೆರೆ ನಾಗರಾಜ್, ಎಸ್.ಟಿ. ವೀರೇಶ್, ಬಿ.ಜಿ. ಅಜಯ್ ಕುಮಾರ್, ಶಿವನಗೌಡ ಟಿ.ಪಾಟೀಲ್, ಎಚ್.ಎನ್ ಜಗದೀಶ್, ಶಿವಪ್ರಕಾಶ್, ಶ್ಯಾಮ್, ರಾಜು, ಅತಿಥಿ ಅಂಬರಕರ್, ಗುರು, ಆನಂದ, ನಾಸಿರ್ ಅಹ್ಮದ್, ಟಿಂಕರ್ ಮಂಜಣ್ಣ, ಚಂದ್ರಶೇಖರ್ ಪೂಜಾರ್, ಮಹಿಳಾ ಮುಖಂಡರುಗಳಾದ ಮಂಜುಳಾ ಇಟಗಿ, ಪುಷ್ಪಾ ವಾಲಿ, ಚೇತನ ಕುಮಾರ್, ಚಂದ್ರಕಲಾ, ಮಮತಾ, ನೀತಾ ನಂದೀಶ್, ಭಾಗ್ಯ ಪಿಸಾಳೆ, ನಾಗರತ್ನ ಕಾಟೆ, ಪುಷ್ಪಾ ದುರುಗೇಶ್, ದ್ರಾಕ್ಷಾಯಿಣೆ ಇತರರು ಪ್ರತಿಭಟನೆಯಲ್ಲಿದ್ದರು.

error: Content is protected !!